ADVERTISEMENT

ಸಮಾಧಿ ಪಕ್ಕದಲ್ಲೇ ಜನವಸತಿ ಅವಶೇಷ!

ಬೃಹತ್ ಶಿಲಾಯುಗಕ್ಕೆ ಸೇರಿದ ಅಪರೂಪದ ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 20:49 IST
Last Updated 12 ಮೇ 2022, 20:49 IST
   

ಮೈಸೂರು: ಬೃಹತ್ ಶಿಲಾಯುಗಕ್ಕೆ ಸೇರಿದ ಸಮಾಧಿಗಳು ಹಾಗೂ ಅವುಗಳ ಪಕ್ಕದಲ್ಲೇ ಊರಿನ ಅವಶೇಷಗಳು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಬೂದಿಪಡಗ ಗ್ರಾಮದಲ್ಲಿ ಪತ್ತೆಯಾಗಿವೆ.

ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕರು 1960ರ ದಶಕದಲ್ಲಿ ನಡೆದ ಭಾರತೀಯ ಪುರಾತತ್ವ ಸರ್ವೇಕ್ಷಣೆಯಲ್ಲಿ ದಾಖಲಾದ ಶಿಲಾಸಮಾಧಿಗಳು ಈಗ ಹೇಗಿವೆ ಎಂಬ ಮರು ಸರ್ವೇಕ್ಷಣೆ ವೇಳೆ ಹಲವು ಅಚ್ಚರಿಗಳು ಕಂಡು ಬಂದಿವೆ.

ವರದಿಯಲ್ಲಿ ದಾಖಲಾದ ಬಹುತೇಕ ಸಮಾಧಿಗಳು ಕೃಷಿ ವಿಸ್ತರಣೆಯಿಂದ ಹಾಳಾಗಿದ್ದವು. ಆದರೆ, ಹೊಸದಾಗಿ ಬೂದಿಪಡಗದಲ್ಲಿ 20ರಿಂದ 25 ಸಮಾಧಿಗಳನ್ನು ಪತ್ತೆ ಮಾಡಲಾಯಿತು. ಇವುಗಳು ಅಂದಾಜು ಕ್ರಿ.ಪೂ. 1,000ದಿಂದ 100ನೇ ಇಸವಿಗೆ ಸೇರಿದ್ದಿರಬಹುದೆಂದು ಅಂದಾಜು ಮಾಡಲಾಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಿ.ಶೋಭಾ, ‘ಪತ್ತೆಯಾಗಿರುವ ಸಮಾಧಿಗಳಲ್ಲಿ 3 ಸಮಾಧಿಗಳನ್ನು ಉತ್ಖನನ ಮಾಡಲಾಗುತ್ತಿದೆ. ಒಂದರಲ್ಲಿ 2 ಗುಂಡಿಗಳು ಪತ್ತೆಯಾಗಿದ್ದರೆ, ಮತ್ತೊಂದರಲ್ಲಿ ತೊಟ್ಟಿ ಸಮಾಧಿ ಸಿಕ್ಕಿದೆ. ಇದರಲ್ಲಿ ಚಪ್ಪಡಿ ಬಳಸಿ ಸಮಾಧಿ ನಿರ್ಮಿಸಲಾಗಿದ್ದು, ಮೂಳೆಯ ಚೂರುಗಳು, ಮಡಕೆಗಳು, ಕಬ್ಬಿಣದ ಉಪಕರಣಗಳು ಸಿಕ್ಕಿವೆ’ ಎಂದು ಹೇಳಿದರು.

‘ಸಮಾಧಿಗಳು ಶವವನ್ನು ಮಲಗಿಸುವಷ್ಟು ಉದ್ದವಿಲ್ಲ. ಬಹುಶಃ ಇವು ಆಂಶಿಕ ಸಮಾಧಿಗಳಿರಬಹುದು ಎನಿಸುತ್ತಿವೆ. ಸಮಾಧಿಗಳ ಪಕ್ಕದಲ್ಲೇ ಊರಿನ ಅವಶೇಷಗಳು ಸಿಕ್ಕಿವೆ. ಈ ಬಗೆಯ ತಾಣಗಳುರಾಜ್ಯದಲ್ಲಿ ಅಪರೂಪದಲ್ಲಿ ಅಪರೂಪ ಎನಿಸಿವೆ’ ಎಂದು ಹೇಳಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಕುಲಸಚಿವ ಆರ್.ಶಿವಪ್ಪ, ‘ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಅತ್ಯಮೂಲ್ಯವಾದ ಸಂಶೋಧನೆ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.