ADVERTISEMENT

ಡೆಂಗಿ ಹತೋಟಿಗೆ ಜನರ ಸಹಕಾರ ಅಗತ್ಯ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 16:27 IST
Last Updated 1 ಜುಲೈ 2024, 16:27 IST
ವಿಧಾನಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾ.ಬಿ.ಸಿ. ರಾಯ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಉಪಸ್ಥಿತರಿದ್ದರು–ಪ್ರಜಾವಾಣಿ ಚಿತ್ರ.
ವಿಧಾನಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾ.ಬಿ.ಸಿ. ರಾಯ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಉಪಸ್ಥಿತರಿದ್ದರು–ಪ್ರಜಾವಾಣಿ ಚಿತ್ರ.   

ಬೆಂಗಳೂರು: ‘ರಾಜ್ಯದಲ್ಲಿ ಡೆಂಗಿ ಜ್ವರ ಹತೋಟಿಗೆ ಜನರ ಸಹಕಾರ ಮುಖ್ಯ. ರೋಗ ಹರಡದಂತೆ ಆರೋಗ್ಯ ಇಲಾಖೆಯ ಜೊತೆಗೆ ಜನರೂ ಮುಂಜಾಗ್ರತೆ ವಹಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದಲ್ಲಿ ಸೋಮವಾರ  ಹಮ್ಮಿಕೊಂಡಿದ್ದ  ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ಸೂಕ್ತ ಚಿಕಿತ್ಸೆ ನೀಡಿದರೂ, ಹಲವು ಕಾಯಿಲೆಗಳು ಹರಡದಂತೆ ಮುಂಜಾಗ್ರತೆ ಅಗತ್ಯ. ಜನತೆ  ಜೀವನ ಶೈಲಿ, ಆಹಾರ ಪದ್ಧತಿಗಳಿಂದಲೂ ಕೆಲ ರೋಗಗಳು ಬಾರದಂತೆ ತಡೆಯಬಹುದು ಎಂದರು.  

ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ವೃತ್ತಿ ಧರ್ಮ  ಪಾಲಿಸಬೇಕು. ವೈದ್ಯರು ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಅನಾಹುತವಾಗುತ್ತದೆ ಎಂದರು.

ಪಶ್ವಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯೂ ಆಗಿದ್ದ ಡಾ.ಬಿ.ಸಿ. ರಾಯ್‌ ಅವರು ವೈದ್ಯ ವೃತ್ತಿಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರಿಂದಲೇ ಅವರ ಜನ್ಮದಿನವನ್ನು ಇಂದು ವೈದ್ಯರ ದಿನವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕೋವಿಡ್ ಸಮಯದಲ್ಲಿನ ವೈದ್ಯರ ಸೇವೆಯನ್ನು ಸಮಾಜ ಸದಾ ಸ್ಮರಿಸುತ್ತದೆ. ಕೋವಿಡ್‌ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಕ್ಷೇತ್ರದ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿವೆ ಎಂದರು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕ ಎಂ.ಟಿ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ವೈದ್ಯರ ಸಂಘದ ಅಧ್ಯಕ್ಷ ವಿವೇಕ್ ದೊರೆ ಉಪಸ್ಥಿತರಿದ್ದರು.

‘ಸಿಗರೇಟು ಬಿಟ್ಟಿದಕ್ಕೆ ಆಯಸ್ಸು ಹೆಚ್ಚಿತು..’

ಸಿಗರೇಟ್ ಆರೋಗ್ಯಕ್ಕೆ ಮಾರಕ ಎಂದರೂ ಬಹಳಷ್ಟು ಜನರು ಸೇದುತ್ತಾರೆ. ಆರೋಗ್ಯಕ್ಕೆ ಆದ್ಯತೆ ನೀಡಿ ದುಶ್ಚಟಗಳಿಂದ ದೂರವಿರಬೇಕು ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದರು. ‘ನನಗೂ ಸಿಗರೇಟು ಸೇದುವ ಅಭ್ಯಾಸವಿತ್ತು. ಇದರಿಂದಾಗಿ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಆಂಜಿಯೋಪ್ಲಾಸ್ಟ್‌ ಮಾಡಿಸಿಕೊಳ್ಳಬೇಕಾಯಿತು. ಸಿಗರೇಟು ಸೇದುವುದನ್ನು ಬಿಟ್ಟಿದ್ದರಿಮದ ಆರೋಗ್ಯ ಆಯಸ್ಸು ವೃದ್ಧಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.