ADVERTISEMENT

ಇಷ್ಟಲಿಂಗ ಪೂಜೆ ಮಾಡಲು ಮುರುಘಾ ಶರಣರಿಗೆ ಅವಕಾಶ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 8:28 IST
Last Updated 2 ಸೆಪ್ಟೆಂಬರ್ 2022, 8:28 IST
ಶಿವಮೂರ್ತಿ ಮುರುಘಾ ಶರಣರು ಮಠದಲ್ಲಿ ಇಷ್ಟಲಿಂಗ ಪೂಜೆಯಲ್ಲಿ ತೊಡಗಿರುವುದು (ಸಂಗ್ರಹ ಚಿತ್ರ)
ಶಿವಮೂರ್ತಿ ಮುರುಘಾ ಶರಣರು ಮಠದಲ್ಲಿ ಇಷ್ಟಲಿಂಗ ಪೂಜೆಯಲ್ಲಿ ತೊಡಗಿರುವುದು (ಸಂಗ್ರಹ ಚಿತ್ರ)   

ಚಿತ್ರದುರ್ಗ: ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಇಷ್ಟಲಿಂಗ ಪೂಜೆ ನೆರವೇರಿಸಲು ಸಾಧ್ಯವಾಗಲಿಲ್ಲ. ಪೂಜಾ ಸಾಮಗ್ರಿಗಳೊಂದಿಗೆ ಬಂದಿದ್ದ ಮಠದ ಸಹಾಯಕರಿಗೆ ತೀವ್ರ ನಿಗಾ ಘಟಕ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.

ಬೆಳಗಿನ ವಾಯುವಿಹಾರ ಮುಗಿಸಿ ಪೂಜಾ ಕೈಂಕರ್ಯ ನೆರವೇರಿಸುವುದು ಶರಣರ ನಿತ್ಯದ ಕಾಯಕ. ಶುಕ್ರವಾರ ನಸುಕಿನಲ್ಲಿ ಜೈಲು ಸೇರಿದ್ದ ಅವರ ಬಳಿ ಇಷ್ಟಲಿಂಗ ಪೂಜೆಗೆ ಅಗತ್ಯ ಇರುವ ಸಾಮಗ್ರಿ ಇರಲಿಲ್ಲ. ಮುರುಘಾಶ್ರೀ ಅವರ ಸಹಾಯಕ ಕರಿಬಸಪ್ಪ ಎಂಬುವರು ಪೂಜಾ ಸಮಾಗ್ರಿಗಳೊಂದಿಗೆ ಬೆಳಿಗ್ಗೆ 9.30ಕ್ಕೆ ಹೊರರೋಗಿ ಘಟಕದ ಬಳಿ ಬಂದಿದ್ದರು. ವೈದ್ಯರು ಆರೋಗ್ಯ ಪರೀಕ್ಷೆ ನಡೆಸುತ್ತಿದ್ದರಿಂದ ಪೊಲಿಸರು ಇದಕ್ಕೆ ಅವಕಾಶ ನೀಡಲಿಲ್ಲ.

ನಿತ್ಯ ಬೆಳಿಗ್ಗೆ 6.30ಕ್ಕೆ ಏಳುತ್ತಿದ್ದ ಶರಣರು ನಿತ್ಯಕರ್ಮ ಮುಗಿಸಿ ವಾಯುವಿಹಾರಕ್ಕೆ ತೆರಳುತ್ತಿದ್ದರು. ಸ್ನಾನ ‌ಮುಗಿಸಿ ಬೆಳಿಗ್ಗೆ 9ಕ್ಕೆ ಇಷ್ಟಲಿಂಗ ಪೂಜೆ ಮಾಡುತ್ತಿದ್ದರು. ಮಧ್ಯಾಹ್ನ 2 ಹಾಗೂ ರಾತ್ರಿ 9 ಕ್ಕೆ ಮತ್ತೆ ಇಷ್ಟಲಿಂಗ ಪೂಜೆಯನ್ನು ಮಾಡುತ್ತಿದ್ದರು ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಮಹಾಂತರುದ್ರ ಸ್ವಾಮೀಜಿ ಭೇಟಿ:

ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ವಿರಕ್ತಮಠದ ಮಹಾಂತರುದ್ರ ಸ್ವಾಮೀಜಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಶಿವಮೂರ್ತಿ ಮುರುಘಾ ಶರಣರನ್ನು ಭೇಟಿಯಾದರು.

'ಸ್ವಾಮೀಜಿ ಅವರಿಗೆ ಪ್ರಸಾದ ತೆಗೆದುಕೊಂಡು ಬಂದಿದ್ದೆ. ಮಠದ ಪ್ರಭಾರ ಪೀಠಧಿಪತಿಯಾಗಿ ನೇಮಕಗೊಂಡರುವ ಬಗ್ಗೆ ಮಾಹಿತಿ ಇಲ್ಲ' ಎಂದು ಮಾಧ್ಯಮ ಪ್ರತಿನಿಧಿಗಳಿಗೆ‌ ಮಾಹಿತಿ ನೀಡಿದರು.

ಮಠದ ಆಹಾರ ನಿರಾಕರಣೆ:

ಮಠದ ವತಿಯಿಂದ ಬೆಳಗಿನ ಉಪಾಹಾರ ಇಡ್ಲಿ ತರಲಾಗಿತ್ತು. ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿದ್ದ ಅವರಿಗೆ ಎರಡು ಇಡ್ಲಿಯನ್ನ ಕಳುಹಿಸಲಾಯಿತು. ಅದನ್ನು ಪರಿಶೀಲನೆ ಮಾಡಿದ ಪೊಲೀಸರು ಹೊರಗಿನ ಆಹಾರಕ್ಕೆ ಅವಕಾಶ ನೀಡಲಿಲ್ಲ.

ತೀವ್ರ ನಿಗಾ ಘಟಕದಲ್ಲಿದ್ದಾಗ ಹಾಲು, ಹಣ್ಣು ಹಾಗೂ ವಸ್ತ್ರ ಇರುವ ಬ್ಯಾಗ್ ಅನ್ನು ಮಧ್ಯಾಹ್ನ ನೀಡಲಾಯಿತು. ಇದನ್ನೂ ಪೊಲೀಸರು ನಿರಾಕರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.