ADVERTISEMENT

ನೈಸ್‌ ಸಂಸ್ಥೆಯ 5 ಟೌನ್‌ಶಿಪ್‌ಗಳಿಗೆ ಅನುಮತಿ

ಹೈಕೋರ್ಟ್‌ ಆದೇಶ ವಜಾಗೊಳಿಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 19 ಮೇ 2020, 21:45 IST
Last Updated 19 ಮೇ 2020, 21:45 IST

ನವದೆಹಲಿ: ಬೆಂಗಳೂರಿನ ಹೊರವಲದಲ್ಲಿನ 43 ಎಕರೆ ಪ್ರದೇಶದಲ್ಲಿ ಐದು ಟೌನ್‌ಶಿಪ್‌ಗಳನ್ನು ನಿರ್ಮಿಸಲು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್‌ (ನೈಸ್) ಸಂಸ್ಥೆಗೆ ರಾಜ್ಯ ಹೈಕೋರ್ಟ್ ಅನುಮತಿ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

‘ನೈಸ್‌ ಸಂಸ್ಥೆಯು ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದೆ, ಒಪ್ಪಂದ, ಯೋಜನಾ ವರದಿಯಲ್ಲಿ ಉಲ್ಲೇಖಿಸಿರುವ ಷರತ್ತುಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್‌ ಹಾಗೂ ದಿನೇಶ್‌ ಮಾಹೇಶ್ವರಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ರಾಜ್ಯ ಸರ್ಕಾರ ಹಾಗೂ ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರಗಳ ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠವು, ಕಾಮಗಾರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾರ್ಪಾಡು ಮಾಡುವ ಮೊದಲು ರಾಜ್ಯ ಸರ್ಕಾರದ ಅನುಮೋದನೆ ಅಗತ್ಯ ಎಂದು ಹೇಳಿದೆ.

ADVERTISEMENT

1997ರ ಏಪ್ರಿಲ್ 3ರಂದು ಮಾಡಿಕೊಳ್ಳಲಾದ ಒಪ್ಪಂದದಲ್ಲಿ ಉಲ್ಲೇಖಿಸಲಾದ ಜಮೀನಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಹುದಾಗಿದೆ. ಈ ಸಂಬಂಧ ಸಂಸ್ಥೆಯು 1995ರ ಆಗಸ್ಟ್‌ನಲ್ಲಿ ಸಲ್ಲಿಸಿರುವ ಯೋಜನೆಯ ತಾಂತ್ರಿಕ ವರದಿಯಲ್ಲಿರುವ ಷರತ್ತುಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಷರತ್ತುಗಳ ಆಚೆ ಕಾಮಗಾರಿ ಕೈಗೊಳ್ಳುವ ಮೊದಲು ಅಗತ್ಯ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆಯೂ ಪೀಠ ತಿಳಿಸಿದೆ.

ರಾಜ್ಯ ಸರ್ಕಾರ ಹಾಗೂ ಸಕ್ಷಮ ಪ್ರಾಧಿಕಾರಗಳು ಈ ಕಾಮಗಾರಿಗೆ ಅಗತ್ಯವೆನ್ನಿಸಿದಲ್ಲಿ ಅನುಮತಿ ನೀಡುವ ಸಂಬಂಧ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಈ ಪ್ರಕ್ರಿಯೆಯು ಪ್ರಸ್ತಾವನೆಯನ್ನು ಸಲ್ಲಿಸಿದ ಆರು ತಿಂಗಳೊಳಗೆ ಪೂರ್ಣಗೊಳ್ಳಬೇಕು ಎಂದೂ ನ್ಯಾಯಪೀಠ ಸೂಚಿಸಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕಮ್ಮಘಟ್ಟ ಗ್ರಾಮದ ಬಳಿಯ ಪೆರಿಫೆರಲ್‌ ರಸ್ತೆಯ ಪಕ್ಕದ 42 ಎಕರೆ 30 ಗುಂಟೆ ಪ್ರತ್ಯೇಕ ಜಮೀನಿನಲ್ಲಿ ಒಪ್ಪಂದದ ಷರತ್ತು ಮೀರಿ ಐದು ಟೌನ್‌ಶಿಪ್‌ ನಿರ್ಮಿಸಲು ಸಂಸ್ಥೆ ಯೋಜನೆ ರೂಪಿಸಿತ್ತು.

ವಸತಿ ಸಮುಚ್ಛಯ ನಿರ್ಮಾಣಕ್ಕೆ ಅನುಮತಿ ಕೋರಿ ನೈಸ್‌ ಸಂಸ್ಥೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿ 2015ರ ಫೆಬ್ರುವರಿಯಲ್ಲಿ ಯೋಜನಾ ಪ್ರಾಧಿಕಾರ ಆದೇಶಿಸಿತ್ತು. ಅದನ್ನು ಪ್ರಶ್ನಿಸಿದ್ದ ಸಂಸ್ಥೆಯ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ 2019ರ ಅಕ್ಟೋಬರ್‌ 15ರಂದು ಪ್ರಾಧಿಕಾರದ ಆದೇಶ ವಜಾಗೊಳಿಸಿ ತೀರ್ಪು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.