ADVERTISEMENT

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅನುಮತಿ

ವಿರೋಧದ ನಡುವೆಯೇ ಮೇಯರ್ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 20:13 IST
Last Updated 9 ನವೆಂಬರ್ 2022, 20:13 IST
ಟಿಪ್ಪು ಸುಲ್ತಾನ್
ಟಿಪ್ಪು ಸುಲ್ತಾನ್   

ಹುಬ್ಬಳ್ಳಿ: ವಿರೋಧ ಪಕ್ಷಗಳ ವಿರೋಧದ ನಡುವೆಯೇ ನಗರದ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮಹಾನಗರ ಪಾಲಿಕೆಯು ಬುಧವಾರ ಅನುಮತಿ ನೀಡಿದೆ. ಜಯಂತಿ ಆಚರಣೆಗೆ ಅನುಮತಿ ಕೋರಿ, ಎಐಎಂಐಎಂ ಪಕ್ಷ ಮತ್ತು ಸಮತಾ ಸೈನಿಕ ದಳ ಮನವಿ ಸಲ್ಲಿಸಿದ್ದವು.

ಈ‌ ಕುರಿತು ಉಪ ಮೇಯರ್, ವಿರೋಧ ಪಕ್ಷದ ನಾಯಕ, ಸಭಾ ನಾಯಕ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರೊಂದಿಗೆ ಮೇಯರ್ ಈರೇಶ ಅಂಚಟಗೇರಿ ಸಂಜೆ ಎರಡು ತಾಸು ಸಭೆ ನಡೆಸಿ, ‘ಗಣೇಶೋತ್ಸವ ಸಂದರ್ಭದಲ್ಲಿ ರಚಿಸಿದ್ದ ಸದನ ಸಮಿತಿ, ಮೈದಾನವನ್ನು ಎಲ್ಲರಿಗೂ ಮುಕ್ತಗೊಳಿಸುವಂತೆ ಶಿಫಾರಸು ಮಾಡಿತ್ತು. ಅದರಂತೆ, ಮಹಾಪುರುಷರ ಜಯಂತಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಧಾರ್ಮಿಕ, ಸಾಮಾಜಿಕ ಹಾಗೂ ವಾಣಿಜ್ಯ ಚಟುವಟಿಕೆಗಳಿಗೂ ಮೈದಾನ ಮುಕ್ತವಾಗಿರಲಿದೆ. ಆಯುಕ್ತರು ಷರತ್ತುಬದ್ಧ ಅನುಮತಿ ನೀಡಲಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಟಿಪ್ಪು ಜಯಂತಿಗೆ ವೈಯಕ್ತಿಕವಾಗಿ ನನ್ನ ಮತ್ತು ಪಕ್ಷದ ವಿರೋಧವಿದ್ದರೂ, ಬೇರೆಯವರು ಆಚರಿಸಲು ಅನುಮತಿ ಕೇಳಿದಾಗ ನಿರಾಕರಿಸಲಾಗದು. ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದಿಲ್ಲ ಎಂದು ಹೇಳಿರುವುದರಿಂದ, ಪಾಲಿಕೆಯಿಂದಲೂ ಜಯಂತಿ ಆಚರಿಸುವುದಿಲ್ಲ’ ಎಂದರು.

ADVERTISEMENT

ಅನುಮತಿ ಬೆನ್ನಲ್ಲೆ, ಟಿಪ್ಪು ಜಯಂತಿಗೆ ಮನವಿ ಸಲ್ಲಿಸಿದ್ದ ಎಐಎಂಐಎಂ ಪಕ್ಷದ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಅವರು, ತಮ್ಮ ಪಕ್ಷದ ಅಧ್ಯಕ್ಷರ ವಿರೋಧ ಲೆಕ್ಕಿಸದೆ, ಗುರುವಾರ ಮಧ್ಯಾಹ್ನ 12 ಗಂಟೆಗೆ ಪಕ್ಷದ ವತಿಯಿಂದಲೇ ಜಯಂತಿ ಆಚರಿಸುವುದಾಗಿ ತಿಳಿಸಿದ್ದಾರೆ. ಆದರೆ, ಮೈದಾನದಲ್ಲಿ ಜಯಂತಿ ಆಚರಣೆಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ನಜೀರ ಅಹ್ಮದ ಹೊನ್ಯಾಳ ವಿರೋಧ ವ್ಯಕ್ತಪಡಿಸಿದ್ದಾರೆ.

‘ಅನುಮತಿ ಕೊಟ್ಟಿರುವುದರ ಹಿಂದೆ ಮುಂಬರುವ ವಿಧಾನಸಭಾ ಚುನಾವಣೆಯ ಲೆಕ್ಕಾಚಾರವಿದೆ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ದೊರೈರಾವ್ ಮಣಿಕುಂಟ್ಲ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.