ADVERTISEMENT

ರಾಜ್ಯದಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ

ರಾತ್ರಿ ವೇಳೆ ಒಳಾಂಗಣಕ್ಕೆ ಸೀಮಿತ l ನಿಯಮ ಉಲ್ಲಂಘನೆ ತಡೆಗೆ ತ್ರಿಸದಸ್ಯ ಸಮಿತಿ

​ಪ್ರಜಾವಾಣಿ ವಾರ್ತೆ
Published 11 ಮೇ 2022, 1:45 IST
Last Updated 11 ಮೇ 2022, 1:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಶಬ್ದಮಾಲಿನ್ಯ ನಿಯಂತ್ರಣ (ನಿರ್ಬಂಧ ಮತ್ತು ನಿಯಂತ್ರಣ) ನಿಯಮ–2000 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮಂಗಳವಾರ ಸುತ್ತೋಲೆ ಹೊರಡಿಸಲಾಗಿದೆ. ಧ್ವನಿವರ್ಧಕಗಳ ಬಳಕೆ ನಿಯಂತ್ರಣಕ್ಕಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಈ ಕ್ರಮ ಕೈಗೊಂಡಿದೆ.

ಧ್ವನಿವರ್ಧಕಗಳ ಬಳಕೆಗೆ ಅನುಮತಿ ಕಡ್ಡಾಯಗೊಳಿಸಿ ಆದೇಶ ಹೊರಡಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯ ತೀರ್ಮಾನದಂತೆ ಈ ಸುತ್ತೋಲೆ ಹೊರಡಿಸಲಾಗಿದೆ. ಶಬ್ದ ಮಾಲಿನ್ಯ ತಡೆಗೆ 2002ರ ಆಗಸ್ಟ್‌ 13ರಂದು ಹೊರಡಿಸಿದ್ದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸಕ್ಷಮ ಪ್ರಾಧಿಕಾರದಿಂದ ಲಿಖಿತ ಅನುಮತಿ ಇಲ್ಲದೇ ಧ್ವನಿವರ್ಧಕ ಬಳಸುವಂತಿಲ್ಲ. ರಾತ್ರಿ 10ರಿಂದ ಬೆಳಿಗ್ಗೆ 6ರ ಅವಧಿಯಲ್ಲಿ ಒಳಾಂಗಣದಲ್ಲಿ ಮಾತ್ರ ಧ್ವನಿವರ್ಧಕ ಬಳಸಬಹುದು. ಶಬ್ದ ಮಾಲಿನ್ಯ ನಿಯಂತ್ರಣ ನಿಯಮ–2000 ಅನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ 2005ರ ಜುಲೈ 18ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯ ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

ADVERTISEMENT

‘ಧ್ವನಿವರ್ಧಕ ಬಳಸುವವರು 15 ದಿನಗಳ ಒಳಗಾಗಿ ಅನುಮತಿ ಪಡೆಯಬೇಕು. ಅನುಮತಿ ಪಡೆಯದೇ ಇರುವವರು ತಾವಾಗಿಯೇ ಧ್ವನಿವರ್ಧಕ ತೆರವುಗೊಳಿಸಬೇಕು ಅಥವಾ ನಿಗದಿತ ಪ್ರಾಧಿಕಾರಗಳು ತೆರವು ಮಾಡಬೇಕು’ ಎಂದು ಸೂಚಿಸಲಾಗಿದೆ.

ಸಮಿತಿಗಳ ರಚನೆ: ಧ್ವನಿವರ್ಧಕಗಳ ಬಳಕೆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲು ಎಲ್ಲ ಕಡೆಗಳಲ್ಲೂ ಮೂವರು ಸದಸ್ಯರ ಸಮಿತಿಗಳನ್ನು ರಚಿಸುವಂತೆ ಸೂಚಿಸಲಾಗಿದೆ. ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಹಾಯಕ ಪೊಲೀಸ್‌ ಕಮಿಷನರ್‌ (ಎಸಿಪಿ), ಮಹಾನಗರ ಪಾಲಿಕೆಗಳ ಕಾರ್ಯನಿರ್ವಾಹಕ ಎಂಜಿನಿಯರ್‌ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿನಿಧಿ ಸಮಿತಿಯಲ್ಲಿರುತ್ತಾರೆ. ಉಳಿದ ಕಡೆಗಳಲ್ಲಿ ಡಿವೈಎಸ್‌ಪಿ, ಆಯಾ ತಾಲ್ಲೂಕಿನ ತಹಶೀಲ್ದಾರ್‌ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿ ಸಮಿತಿಯಲ್ಲಿರಬೇಕು ಎಂದು ಸೂಚನೆ ನೀಡಲಾಗಿದೆ.

‘ಆದೇಶ ಎಲ್ಲರಿಗೂ ಅನ್ವಯ’

‘ಧ್ವನಿವರ್ಧಕ ಬಳಕೆ ನಿಯಂತ್ರಣ ಆದೇಶವು ಮಸೀದಿ ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ. ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಧ್ವನಿವರ್ಧಕ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪರಿಸರ ಸಚಿವ ಆನಂದ್‌ ಸಿಂಗ್‌ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘‌6 ಗಂಟೆಗೂ ಮುನ್ನ ಆಜಾನ್‌ ಕೂಗಲು ಧ್ವನಿವರ್ಧಕ ಬಳಕೆಗೆ ಅವಕಾಶ ಇರುವುದಿಲ್ಲ. ಶಬ್ದ ಮಾಲಿನ್ಯ ಪರಿಶೀಲನೆಗೆ ಉಪಕರಣ ಖರೀದಿಸಿ ಪೊಲೀಸರಿಗೆ ನೀಡಲಾಗಿದೆ. ಪೊಲೀಸರು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜತೆಗೂಡಿ ಕ್ರಮ ಜರುಗಿಸುತ್ತಾರೆ’ ಎಂದರು.

ಶಬ್ದ ಮಾಲಿನ್ಯ ತಡೆಯುವ ವಿಷಯದಲ್ಲಿ ಸಾರ್ವಜನಿಕರು ದೂರು ನೀಡುವವರೆಗೂ ಕಾಯುವುದಿಲ್ಲ. ನಿಯಮ ಉಲ್ಲಂಘನೆ ಆಗುತ್ತಿರುವ ಕುರಿತು ಮಾಹಿತಿ ಬಂದರೆ ಸಾಕು. ಸ್ವಯಂಪ್ರೇರಿತವಾಗಿ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.