ಬೆಂಗಳೂರು: ಮೂಲಸೌಕರ್ಯಗಳನ್ನು ಪೂರೈಸದ ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡಿರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಲಾಗಿದೆ.
‘ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡುವಾಗ ನಿಯಮದಂತೆ 100 ಹಾಸಿಗೆಗಳ ಸೌಲಭ್ಯ ಇರುವ ಆಸ್ಪತ್ರೆಗಳ ಜತೆಗೆ ಒಪ್ಪಂದ ಮಾಡಿಕೊಂಡಿರಬೇಕು. ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ನುರಿತ ಬೋಧನಾ ಸಿಬ್ಬಂದಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒಳಗೊಂಡಿರಬೇಕು. ಕಾಲೇಜುಗಳಿಗೆ ಭೇಟಿ ನೀಡಿದ್ದ ವಿಶ್ವವಿದ್ಯಾಲಯದ ಸ್ಥಳೀಯ ತಪಾಸಣಾ ಸಮಿತಿಗಳು (ಎಲ್‌ಐಸಿ) 20ಕ್ಕೂ ಹೆಚ್ಚು ಕಾಲೇಜುಗಳು ನಿಯಮ ಪಾಲಿಸಿಲ್ಲ ಎಂದು ಅಲ್ಲಿನ ನ್ಯೂನತೆ ಪಟ್ಟಿ ಮಾಡಿವೆ. ಆದರೂ ಅವುಗಳಿಗೆ ಅನುಮತಿ ನೀಡಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ದೂರಿನಲ್ಲಿ ವಿವರಿಸಿದ್ದಾರೆ.
ನಿಯಮಗಳನ್ನು ಪಾಲಿಸದ ನರ್ಸಿಂಗ್ ಕಾಲೇಜುಗಳಿಗೆ ಸಿಂಡಿಕೇಟ್ ಸಭೆಯಲ್ಲೂ ಅನುಮೋದನೆ ಪಡೆಯಲಾಗಿದೆ. ಈ ಕುರಿತು ಉನ್ನತ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
‘ಮೂಲಸೌಕರ್ಯ ಇಲ್ಲದ ಯಾವುದೇ ಕಾಲೇಜುಗಳಿಗೆ ಅನುಮತಿ ನೀಡಿಲ್ಲ. ದೂರುಗಳಿದ್ದರೆ ದಾಖಲೆಗಳನ್ನು ಸಲ್ಲಿಸಲಿ. ವಿಳಂಬ ಮಾಡದೆ ತಪಾಸಣೆ ನಡೆಸಲಾಗುವುದು. ತಪ್ಪು ನಡೆದಿದ್ದರೆ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಕುಲಪತಿ ಎಂ.ಕೆ. ರಮೇಶ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.