ಬೆಂಗಳೂರು: ಎರಡು ತಿಂಗಳ ಬಳಿಕ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ನಗರದ ಹಲವೆಡೆ ಕೆಲವು ಸಲೂನ್‌ಗಳು, ಬ್ಯೂಟಿ ಪಾರ್ಲರ್‌ಗಳು ಮತ್ತೆ ಬಾಗಿಲು ತೆರೆದುಕೊಂಡಿವೆ.
ಕೊರೊನಾ ಹಿನ್ನೆಲೆಯಲ್ಲಿ ಕೆಲವು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಸಲೂನ್‌ಗಳು ಕೈಗೊಳ್ಳಬೇಕಾಗಿದೆ. ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಕೆಲವು ಕೇಂದ್ರಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಾಗಲಗುಂಟೆಯಲ್ಲಿರುವ ಸ್ಪಿನ್ ಸಲೂನ್‌ಗೆ ಉತ್ತರ ವಲಯ ಡಿಸಿಪಿ ಶಶಿಕುಮಾರ್ ಬುಧವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಕಾರದ ಮಾರ್ಗಸೂಚಿಯಂತೆ ಸ್ಪಿನ್ ಸಲೂನ್‌ನಲ್ಲಿ ಪ್ರತಿ ಗ್ರಾಹಕರಿಗೆ ಥರ್ಮಲ್ ಸ್ಕ್ಯಾನಿಂಗ್ ಪರಿಶೀಲನೆ ಬಳಿಕ, ಸ್ಯಾನಿಟೈಸರ್ ಬಳಸಿದ ನಂತರ ಒಳಗೆ ಬಿಡಲಾಗುತ್ತಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಅಂತರ ಕಾಪಾಡಲು ಕೂಡಾ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಪ್ರತಿ ಗ್ರಾಹಕ ತೆರಳಿದ ಬಳಿಕ ಬಳಸಿದ ಕುರ್ಚಿ ಮತ್ತು ನೆಲವನ್ನು ಸಂಪೂರ್ಣ ಸ್ವಚ್ಛಗೊಳಿಲಾಗುತ್ತಿದೆ. ಇಲ್ಲಿ ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಡೆಯಲಾಗುತ್ತಿದೆ. ಇದೇ ರೀತಿಯ ವ್ಯವಸ್ಥೆಯನ್ನು ಎಲ್ಲ ಸಲೂನ್‌ಗಳು ಪಾಲಿಸಬೇಕು ಎಂದು ಗ್ರಾಹಕರು ಪ್ರತಿಕ್ರಿಯಿಸಿದ್ದಾರೆ.
ಸ್ಪಿನ್ ಸಲೂನ್‌ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಡಿಸಿಪಿ ಶಶಿಕುಮಾರ್, ‘ಇಂದಿನಿಂದ ಕೆಲಸ ಮಾಡಲು ಸಲೂನ್‌ಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕೆಲವು ಸಲೂನ್‌ಗಳಿಗೆ ಆಕಸ್ಮಿಕವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಈ ಸಲೂನ್‌ನಲ್ಲಿ ಆರೋಗ್ಯ, ಸ್ವಚ್ಛತೆ ಕಾಪಾಡಲು ಹೆಚ್ಚಿನ ಒತ್ತು ನೀಡಲಾಗಿದೆ. ಟವಲ್ ಬಳಸುವ ಬದಲು ವಿಲೇವಾರಿ ವಸ್ತುವನ್ನು ಬಳಸುತ್ತಿದ್ದಾರೆ. ಎಲ್ಲರೂ ಇದೇ ಮಾದರಿ ಅನುಸರಿಸಬೇಕು‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.