ADVERTISEMENT

ಎಂಜಿನಿಯರಿಂಗ್ ಕೌಶಲಾಭಿವೃದ್ಧಿಗೆ ‘ಬೆಸ್ಟ್‌’ ಕೇಂದ್ರ

ಬಜಾಜ್‌–ಪಿಇಎಸ್‌ ಸಹಯೋಗದಲ್ಲಿ ತರಬೇತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 16:51 IST
Last Updated 4 ಅಕ್ಟೋಬರ್ 2024, 16:51 IST
ಸಚಿವ ಡಾ.ಎಂ.ಸಿ.ಸುಧಾಕರ್ ಅವರು, ಪಿಇಎಸ್‌ ವಿಶ್ವವಿದ್ಯಾಲಯದ ‘ಬೆಸ್ಟ್‌’ ಕೇಂದ್ರದ ಪ್ರಯೋಗಾಲಯದಲ್ಲಿ ಇರುವ ಅತ್ಯಾಧುನಿಕ ಯಂತ್ರೋಪಕರಣಗಳ ಬಗ್ಗೆ ವಿದ್ಯಾರ್ಥಿನಿಯಿಂದ ವಿವರಣೆ ಪಡೆದುಕೊಂಡರು. ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಜವಾಹರ್ ದೊರೆಸ್ವಾಮಿ ಇದ್ದರು  –ಪ್ರಜಾವಾಣಿ ಚಿತ್ರ
ಸಚಿವ ಡಾ.ಎಂ.ಸಿ.ಸುಧಾಕರ್ ಅವರು, ಪಿಇಎಸ್‌ ವಿಶ್ವವಿದ್ಯಾಲಯದ ‘ಬೆಸ್ಟ್‌’ ಕೇಂದ್ರದ ಪ್ರಯೋಗಾಲಯದಲ್ಲಿ ಇರುವ ಅತ್ಯಾಧುನಿಕ ಯಂತ್ರೋಪಕರಣಗಳ ಬಗ್ಗೆ ವಿದ್ಯಾರ್ಥಿನಿಯಿಂದ ವಿವರಣೆ ಪಡೆದುಕೊಂಡರು. ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಜವಾಹರ್ ದೊರೆಸ್ವಾಮಿ ಇದ್ದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಲವು ಎಂಜಿನಿಯರಿಂಗ್‌ ಕಾಲೇಜುಗಳು ಮೆಕ್ಯಾನಿಕಲ್‌, ಸಿವಿಲ್‌ ಮತ್ತು ಆಟೊಮೋಟಿವ್‌ ಕೋರ್ಸ್‌ಗಳನ್ನು ನಿಲ್ಲಿಸುತ್ತಿವೆ. ಆದರೆ ಈ ಕೋರ್ಸ್‌ಗಳಿಗೆ ಭವಿಷ್ಯ ಚೆನ್ನಾಗೇ ಇದೆ. ಉದ್ಯಮಗಳೇ ಮುಂದೆ ಬಂದು ತರಬೇತಿ ಕೇಂದ್ರ ಆರಂಭಿಸಿರುವುದು ಇದನ್ನೇ ಹೇಳುತ್ತದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ಪಿಇಎಸ್ ವಿಶ್ವವಿದ್ಯಾಲಯ ಮತ್ತು ಬಜಾಜ್ ಕಂಪನಿಯ ಸಹಯೋಗದಲ್ಲಿ ಆರಂಭಿಸಲಾಗಿರುವ ‘ಬೆಸ್ಟ್‌–ಬಜಾಜ್‌ ಎಂಜಿನಿಯರಿಂಗ್ ಕೌಶಲ ತರಬೇತಿ’ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲಾ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ನೀಡುವ ಕಾರ್ಯಕ್ರಮ ರಾಜ್ಯದಲ್ಲಿ ಈಗಾಗಲೇ ಇದೆ. ಕೆಲವೆಡೆ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ‘ಬೆಸ್ಟ್‌’ ಕೇಂದ್ರವು ಅತ್ಯುತ್ತಮವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಉದ್ಯಮಗಳಿಗೂ ಅನುಕೂಲವಾಗಲಿದೆ’ ಎಂದರು.

ADVERTISEMENT

ಬಜಾಜ್‌ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ವಿಭಾಗದ ಉಪಾಧ್ಯಕ್ಷ ಸುಧಾಕರ್ ಗುಡಪಾಟಿ ಮಾತನಾಡಿ, ‘ಹಿಂದುಳಿದ ಜಿಲ್ಲೆಗಳ ಮತ್ತು ಗ್ರಾಮೀಣ ಪ್ರದೇಶದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿ ಹೆಚ್ಚಿಸುವ ಸಲುವಾಗಿ ಇಂತಹ ಯೋಜನೆ ರೂಪಿಸಲಾಯಿತು. ಉದ್ಯಮ ಬೇಡುವ ಕೌಶಲಮಟ್ಟಕ್ಕಿಂತ ಮತ್ತು ಆಗತಾನೇ ಕೋರ್ಸ್‌ ಮುಗಿಸಿ ಬರುವ ಎಂಜಿನಿಯರ್‌ಗಳ ಕೌಶಲಮಟ್ಟ ತೀರಾ ಕಡಿಮೆ ಇರುತ್ತದೆ. ಈ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದಲೇ ‘ಬೆಸ್ಟ್‌’ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.

ಪಿಇಎಸ್‌ನ ಬೆಂಗಳೂರು ಕ್ಯಾಂಪಸ್‌ನಲ್ಲಿ ರೂಪಿಸಲಾಗಿರುವ ‘ಬೆಸ್ಟ್‌’ ಕೇಂದ್ರದಲ್ಲಿ 16 ಅತ್ಯಾಧುನಿಕ ಪ್ರಯೋಗಾಲಯಗಳಿವೆ. ತಯಾರಿಕಾ ವಲಯದಲ್ಲಿ ಬಳಕೆಯಲ್ಲಿರುವ ತಂತ್ರಜ್ಞಾನ, ತಾಂತ್ರಿಕತೆ ಮತ್ತು ಯಂತ್ರೋಪಕರಣಗಳನ್ನು ಪ್ರತಿ ಪ್ರಯೋಗಾಲಯವೂ ಹೊಂದಿವೆ. ಈ ಯಂತ್ರೋಪಕರಣಗಳ ಕಾರ್ಯನಿರ್ವಹಣೆ, ಪ್ರಾಯೋಗಿಕ ಬಳಕೆ ಮತ್ತು ರಿಪೇರಿಯನ್ನೂ ಪಠ್ಯಕ್ರಮ ಒಳಗೊಂಡಿದೆ.

ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್.ದೊರೆಸ್ವಾಮಿ, ಆಟೊಮೋಟಿವ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಕೌನ್ಸಿಲ್‌ ಅಧ್ಯಕ್ಷ ಎಫ್‌.ಆರ್‌.ಸಿಂಘ್ವಿ ಕಾರ್ಯಕ್ರಮದಲ್ಲಿ ಇದ್ದರು.

ಕಂಪನಿಯಿಂದಲೇ ಶೇ 80ರಷ್ಟು ಶುಲ್ಕ

‘ಎರಡೂ ಕೋರ್ಸ್‌ಗಳಿಗೆ ₹1.20 ಲಕ್ಷ ವೆಚ್ಚವಾಗಲಿದೆ. ಇದರಲ್ಲಿ ₹90000ವನ್ನು ಬಜಾಜ್‌ ಕಂಪನಿಯೇ ಒದಗಿಸಲಿದೆ. ಹಾಸ್ಟೆಲ್‌ ಮತ್ತು ಊಟದ ವೆಚ್ಚ ₹60000ವಿದ್ದು ಅದರಲ್ಲಿ ₹30000ವನ್ನು ವಿಶ್ವವಿದ್ಯಾಲಯವೇ ಭರಿಸಲಿದೆ’ ಎಂದು ಪಿಇಎಸ್‌ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ. ‘ಕಂಪನಿ ಮತ್ತು ವಿಶ್ವವಿದ್ಯಾಲಯದ ಸಹಾಯಧನ ಹೊರತುಪಡಿಸಿದ ಶುಲ್ಕ ಭರಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿದ್ದರೆ ಆ ಶುಲ್ಕವನ್ನು ಭರಿಸಲು ಕೆಲ ಕಂಪನಿಗಳು ಮುಂದೆ ಬಂದಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಬಜಾಜ್‌ ಕಂಪನಿಯ ಷರತ್ತು. ಜುಲೈನಲ್ಲಿ ಆರಂಭವಾಗಿರುವ ಮೊದಲ ಕೋರ್ಸ್‌ನಲ್ಲಿ 60 ವಿದ್ಯಾರ್ಥಿಗಳಿದ್ದು ಆ ಪೈಕಿ 40 ಮಂದಿ ಕಲ್ಯಾಣ ಕರ್ನಾಟಕ ಭಾಗದವರು’ ಎಂದು ತಿಳಿಸಿದೆ. ‘ಕೋರ್ಸ್ ಆರಂಭಕ್ಕೂ ಮುನ್ನ ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶದ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಒಟ್ಟು ಅಂಕ ಶೇ50ಕ್ಕಿಂತ ಹೆಚ್ಚಿರಬೇಕು ಮತ್ತು ಯಾವುದೇ ಬ್ಯಾಕ್‌ಲಾಗ್‌ಗಳು ಇರಬಾರದು’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.