ಬಾಗಲಕೋಟೆ/ಬೆಳಗಾವಿ: ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪ್ರವಾಹಕ್ಕೆ ಸಿಲುಕಿ ಬಹುತೇಕ ಗುರುತು ಸಿಗದಂತಾಗಿದ್ದ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ಏಳು ಸರ್ಕಾರಿ ಶಾಲೆಗಳು ಹಾಗೂ ಎರಡು ಅಂಗನವಾಡಿಗಳಿಗೆಬೆಂಗಳೂರಿನ ಪ್ರೊ.ಎಂ.ಆರ್.ದೊರೆಸ್ವಾಮಿ ಅವರ ಪಿಇಎಸ್ ಶಿಕ್ಷಣ ಸಂಸ್ಥೆ ಮರುಜೀವ ನೀಡಿದೆ.
ಹೊಸ ಕೊಠಡಿಗಳೊಂದಿಗೆ ಸುಣ್ಣ–ಬಣ್ಣಗಳಿಂದ ಅಲಂಕೃತಗೊಂಡಿರುವ ಶಾಲೆಗಳು ನಳನಳಿಸುತ್ತಿವೆ. ಈಗಾಗಲೇ ಕೆಲವು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಹಸ್ತಾಂತರಗೊಂಡಿದ್ದು, ಅಲ್ಲೀಗ ಮಕ್ಕಳ ಕಲರವ ಕೇಳಿಬರುತ್ತಿದೆ.
ಘಟಪ್ರಭಾ ನದಿಯ ಆರ್ಭಟಕ್ಕೆ ಮುಧೋಳ ತಾಲ್ಲೂಕಿನ ಒಂಟಿಗೋಡಿ, ಬಿ.ಕೆ.ಬುದ್ನಿಯ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳು ಸಂಪೂರ್ಣ ಹಾನಿಗೀಡಾಗಿದ್ದವು. ಬಾದಾಮಿ ತಾಲ್ಲೂಕಿನ ಕರ್ಲಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವೂ ಪ್ರವಾಹಕ್ಕೆ ಸಿಲುಕಿ ನಲುಗಿತ್ತು. ಇಡೀ ಕಟ್ಟಡ ಕೆಸರಿನಿಂದ ಕೂಡಿ, ಮತ್ತೆ ಬಳಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿತ್ತು. ಇಂತಹ ಸಂಕಷ್ಟದಲ್ಲಿ ಪಿಇಎಸ್ ಸಂಸ್ಥೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನೆರವಿಗೆ ಬಂದಿತ್ತು.
ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಹಾನಿಗೀಡಾಗಿದ್ದ ಒಂಟಿಗೋಡಿ ಶಾಲೆಯ 11 ಕೊಠಡಿಗಳು, ಬಿ.ಕೆ.ಬುದ್ನಿಯ ಏಳು ಕೊಠಡಿಗಳು ಹಾಗೂ ಮಲಪ್ರಭಾ ನದಿ ಮುನಿಸಿಗೆ ಸಿಲುಕಿದ್ದ ಕರ್ಲಕೊಪ್ಪ ಶಾಲೆಯ 10ರ ಪೈಕಿ ಆರು ಕೊಠಡಿಗಳು ಈಗ ಮರು ನಿರ್ಮಾಣಗೊಂಡಿವೆ.
ನಾಲ್ಕು ಶಾಲೆಗಳ ಪುನರ್‌ನಿರ್ಮಾಣ:
ಬೆಳಗಾವಿ ವಿಭಾಗದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆ
ಗಳನ್ನು ಹೊಸದಾಗಿ ಕಟ್ಟಲಾಗುತ್ತಿದೆ.
ರಾಯಬಾಗ ತಾಲ್ಲೂಕು ನಿಲಜಿಯ ಹಸರೆತೋಟದ ಕೆಪಿಎಸ್ ಸರ್ಕಾರಿ ಹಿ.ಪ್ರಾ. ಶಾಲೆ ಮತ್ತು ನದಿಇಂಗಳಗಾಂವ ಪೇರಲತೋಟದ ಸ.ಕಿ. ಪ್ರಾಥಮಿಕ ಶಾಲೆಗೆ ತಲಾ ಐದು ಹಾಗೂ ಅದೇ ತಾಲ್ಲೂಕಿನ ತೀರ್ಥ ಗ್ರಾಮದ ಸ.ಹಿ.ಪ್ರಾ. ಶಾಲೆಗೆ ಮೂರು ಕೊಠಡಿಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಮಹಿಷವಾಡಗಿ ಗ್ರಾಮದಲ್ಲಿ ಎಂಟು ಕೊಠಡಿಗಳನ್ನು ಕಟ್ಟಿಸಲಾಗುತ್ತಿದೆ.
ಈ ಪೈಕಿ ಹಸರೆತೋಟ ಮತ್ತು ನದಿಇಂಗಳಗಾಂವದಲ್ಲಿ ಕಟ್ಟಡಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಪ್ರವಾಹದ ಸಂಕಷ್ಟದ ನಂತರಈ ಶಾಲೆಗಳಲ್ಲಿ, ಪ್ರಸಕ್ತ ವರ್ಷದ ಚಟುವಟಿಕೆಗಳು ಲಭ್ಯವಿರುವ ಕೊಠಡಿಗಳಲ್ಲಿ ಹಾಗೂ ತಾತ್ಕಾಲಿಕ ಶೆಡ್‌ಗಳಲ್ಲಿ ನಡೆಯುತ್ತಿದ್ದವು.
‘ಪಿಇಎಸ್ ವಿಶ್ವವಿದ್ಯಾಲಯದವರು ಸರ್ಕಾರಿ ಶಾಲೆಗಳನ್ನು ತ್ವರಿತವಾಗಿ ಕಟ್ಟಿಸಿಕೊಡುತ್ತಿರುವುದರಿಂದ ಅನುಕೂಲವಾಗಲಿದೆ. ವಿಶೇಷವಾಗಿ ಪ್ರವಾಹಪೀಡಿತ ಪ್ರದೇಶಗಳಲ್ಲಿನ ಶಾಲೆಗಳಿಗೆ ಅವರು ಒತ್ತು ನೀಡಿರುವುದು ಅಭಿನಂದನಾರ್ಹ’ ಎಂದು ಬಾಗಲಕೋಟೆ ಡಿಡಿಪಿಐ ಶ್ರೀಶೈಲ ಬಿರಾದಾರ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.
ಗುಣಮಟ್ಟದ ಕಾಮಗಾರಿಗೆ ಒತ್ತು..
‘ನಮ್ಮ ಸಂಸ್ಥೆಯ ಕುಲಪತಿ ಡಾ.ಎಂ.ಆರ್. ದೊರೆಸ್ವಾಮಿ ಅವರ ಒತ್ತಾಸೆಯ ಮೇರೆಗೆ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಈ ಸೇವಾ ಕಾರ್ಯಕ್ಕೆ ಪ್ರತೀ ಶಾಲೆಗೆ ಸರಾಸರಿ ತಲಾ ₹ 50 ಲಕ್ಷ ವಿನಿಯೋಗಿಸಿದ್ದೇವೆ’ ಎಂದುಪಿಇಎಸ್ ವಿಶ್ವವಿದ್ಯಾಲಯದ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಎಸ್.ವಿ. ವೆಂಕಟೇಶ್ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಹಲವು ಕಡೆ ಕಟ್ಟಡಗಳು ಸಂಪೂರ್ಣ ಕುಸಿದಿದ್ದವು. ಕೆಸರು ತುಂಬಿದ್ದವು ಅವುಗಳನ್ನು ಸ್ವಚ್ಛಗೊಳಿಸಿ ಅಡಿಪಾಯ ಸುಭದ್ರಗೊಳಿಸಲಾಗಿದೆ. ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ನಮ್ಮ ಸಂಸ್ಥೆಯ ಕಟ್ಟಡಗಳಿಗೆ ನೀಡುವ ಪ್ರಾಮುಖ್ಯತೆಯನ್ನೇ ಇಲ್ಲಿಯೂ ನೀಡಿದ್ದೇವೆ’ ಎಂದರು.
ಈಗಾಗಲೇ ಬಾಗಲಕೋಟೆ ಜಿಲ್ಲೆಯ ಕಟ್ಟಡಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದ್ದೇವೆ. ಬೆಳಗಾವಿ ಜಿಲ್ಲೆಯ ಕಟ್ಟಡಗಳನ್ನು ಮಾರ್ಚ್ ವೇಳೆಗೆ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಲಿದ್ದೇವೆ ಎಂದು ಹೇಳಿದರು.
***
ಡಾ.ಎಂ.ಆರ್. ದೊರೆಸ್ವಾಮಿ ಅವರ ಒತ್ತಾಸೆಯ ಮೇರೆಗೆ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಪ್ರತೀ ಶಾಲೆಗೆ ಸರಾಸರಿ ತಲಾ ₹ 50 ಲಕ್ಷ ವಿನಿಯೋಗಿಸಿದ್ದೇವೆ
- ಡಾ.ಎಸ್.ವಿ. ವೆಂಕಟೇಶ್, ಪಿಇಎಸ್ ವಿ.ವಿ. ಸಿವಿಲ್ ವಿಭಾಗದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.