ADVERTISEMENT

ಆಯ್ಕೆ ಪ್ರಶ್ನಿಸಿದ ಅರ್ಜಿ: ಯತ್ನಾಳಗೆ ‘ಸುಪ್ರೀಂ’ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:41 IST
Last Updated 25 ಅಕ್ಟೋಬರ್ 2024, 16:41 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಆಯ್ಕೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಲು ‘ಸುಪ್ರೀಂ’ ಕೋರ್ಟ್‌ ಶುಕ್ರವಾರ ಅಂಗೀಕರಿಸಿದೆ. ಯತ್ನಾಳ ಅವರಿಗೆ ನ್ಯಾಯಪೀಠ ನೋಟಿಸ್‌ ಜಾರಿ ಮಾಡಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಅಬ್ದುಲ್‌ ಹಮೀದ್‌ ಮುಶ್ರೀಫ್ ಅವರು ಯತ್ನಾಳ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಕೆಲವು ನ್ಯೂನತೆಗಳನ್ನು ಸರಿಪಡಿಸದೆ ಅರ್ಜಿ ಸಲ್ಲಿಸಲಾಗಿದೆ ಎಂಬ ಕಾರಣಕ್ಕೆ ಅರ್ಜಿದಾರರಿಗೆ ನ್ಯಾಯಪೀಠ ₹1 ಲಕ್ಷ ದಂಡ ವಿಧಿಸಿತ್ತು. 

ಈ ಆದೇಶ ಪ್ರಶ್ನಿಸಿ ಮುಶ್ರೀಫ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯದ ಬಗ್ಗೆ ಹೈಕೋರ್ಟ್‌ ಹೆಚ್ಚು ಸಮಗ್ರ ದೃಷ್ಟಿಕೋನದಿಂದ ನೋಡಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. 

ADVERTISEMENT

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಮೇಲ್ಮನವಿಯನ್ನು ಅಂಗೀಕರಿಸಿತು. ಆದರೆ, ದಂಡ ವಿಧಿಸಿದ್ದನ್ನು ರದ್ದುಗೊಳಿಸಲು ನಿರಾಕರಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.