ಬೆಂಗಳೂರು: ಉಡುಪಿಯ ಶೀರೂರು ಮಠಕ್ಕೆ ಬಾಲ ಪೀಠಾಧಿಪತಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪಿ. ಲಾತವ್ಯ ಆಚಾರ್ಯ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ‘18 ವರ್ಷದ ಒಳಗಿನವರಿಗೆ ಸನ್ಯಾಸ ದೀಕ್ಷೆ ನೀಡಬಾರದು ಎಂಬುದಕ್ಕೆ ಯಾವುದೇ ಕಾನೂನು ಇಲ್ಲ’ ಎಂದು ಹೇಳಿದೆ.
‘ಬಾಲಕರಿಗೆ ಸನ್ಯಾಸ ದೀಕ್ಷೆ ಕೊಡುವುದು ಸಂವಿಧಾನಕ್ಕೆ ವಿರುದ್ಧವಾದ ನಡೆ’ ಎಂದು ಅರ್ಜಿದಾರರು ವಾದಿಸಿದ್ದರು. ಧಾರ್ಮಿಕ ಆಚರಣೆಗಳು 800 ವರ್ಷಗಳಿಂದ ನಡೆದುಕೊಂಡು ಬರುತ್ತಿವೆ ಎಂಬುದನ್ನು ಗಮನಿಸಿದ ಪೀಠ, ‘ಯಾವುದೇ ಶಾಸನ ಅಥವಾ ಸಂವಿಧಾನವನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಸಾಬೀತಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.
ಆರ್ಶ್ ಮಾರ್ಗ ಸೇವಾ ಟ್ರಸ್ಟ್ ಮತ್ತು ಇತರರ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ 2019ರಲ್ಲಿ ನೀಡಿದ್ದ ಆದೇಶವನ್ನು ಪೀಠ ಉಲ್ಲೇಖಿಸಿದೆ.
‘ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದರೆ ಸಂವಿಧಾನ ಕಾಯುವ ಪ್ರಾಧಿಕಾರವಾಗಿ ತನ್ನ ಪಾತ್ರವನ್ನು ಉಲ್ಲಂಘಿಸಿದಂತೆ ಆಗಲಿದೆ’ ಎಂದು ಹೇಳಿತು.
ಪೀಠಕ್ಕೆ ಸಲಹೆ ನೀಡಲು ನೇಮಕವಾಗಿರುವ ವಕೀಲ ಎಸ್.ಎಸ್. ನಾಗಾನಂದ ಅವರು, ‘18 ವರ್ಷಕ್ಕಿಂತ ಕೆಳಗಿನವರಿಗೆ ಸನ್ಯಾಸ ನೀಡಬಾರದು ಎಂಬುದಕ್ಕೆ ಯಾವುದೇ ಶಾಸನ ಇಲ್ಲ ಮತ್ತು ಅದು ಹಾನಿಕಾರಕ ಸಂಪ್ರದಾಯವೂ ಅಲ್ಲ’ ಎಂದು ವರದಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.