ADVERTISEMENT

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿಗಳ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 19:40 IST
Last Updated 2 ಜುಲೈ 2024, 19:40 IST
<div class="paragraphs"><p>ಗೌರಿ ಲಂಕೇಶ್</p></div>

ಗೌರಿ ಲಂಕೇಶ್

   

ಬೆಂಗಳೂರು: ‘ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ನಮ್ಮನ್ನು ಬಂಧಿಸಿದ ನಂತರ ವಿಚಾರಣೆ ಸಂದರ್ಭದಲ್ಲಿ ಸಾಕಷ್ಟು ದೈಹಿಕ ಹಿಂಸೆ ನೀಡಿದ್ದು, ಈ ಬಗ್ಗೆ ವಿಶೇಷ ವಿಚಾರಣೆ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಪ್ರಕರಣದ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತಂತೆ ಆರೋಪಿಗಳಾದ ಸುಜಿತ್ ಕುಮಾರ್, ಮನೋಹರ ಯಡವೆ, ಅಮೋಲ್ ಕಾಳೆ ಮತ್ತು ಅಮಿತ್ ರಾಮಚಂದ್ರ ದಿಗ್ವೇಕರ್ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ಎಸ್‌.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ‌ದ್ದಾರೆ. ಆದ ಕಾರಣ ಅವರ ಮನವಿ ಪರಿಗಣಿಸಲಾಗದು’ ಎಂದು ತಿಳಿಸಿ ಅರ್ಜಿ ವಿಲೇವಾರಿ ಮಾಡಿದೆ.

ADVERTISEMENT

‘ನಮ್ಮನ್ನು ಬಂಧಿಸಿದ ವೇಳೆ ಪೊಲೀಸರು ಕಾನೂನಿನ ರೀತ್ಯಾ ನಮ್ಮ ಕುಟುಂಬ ಸದಸ್ಯರಿಗಾಗಲೀ ಅಥವಾ ಹತ್ತಿರದವರಿಗಾಗಲೀ ಯಾವುದೇ ಮಾಹಿತಿ ನೀಡಿಲ್ಲ. ಬಂಧನದ ನಂತರ ಪೊಲೀಸ್‌ ಕಸ್ಟಡಿಯಲ್ಲಿ ನಮ್ಮನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಂಡು ದೈಹಿಕವಾಗಿ ಚಿತ್ರಹಿಂಸೆ ನೀಡಲಾಗಿದೆ. ಪೊಲೀಸರ ಈ ಕಾನೂನು ಬಾಹಿರ ಕ್ರಮದ ಬಗ್ಗೆ ತೆ ವಿಶೇಷ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಗೌರಿ ಲಂಕೇಶ್‌ ಅವರು 2018ರಲ್ಲಿ ಕೊಲೆಯಾಗಿದ್ದರು. ನಂತರ ಪ್ರಕರಣ ಸಂಬಂಧ ಅರ್ಜಿದಾರರನ್ನು ಕರ್ನಾಟಕ ಹಾಗೂ ಹೊರ ರಾಜ್ಯದ ವಿವಿಧ ಪ್ರದೇಶಗಳಿಂದ ಪೊಲೀಸರು ಬಂಧಿಸಿದ್ದರು. ಸರ್ಕಾರದ ಪರ ರಾಜ್ಯ ಪ್ರಾಸಿಕ್ಯೂಟರ್ ಬಿ.ಎ.ಬೆಳ್ಳಿಯಪ್ಪ ಹಾಗೂ ಎನ್‌.ಅನಿತಾ ಗಿರೀಶ್‌ ಹಾಜರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.