ADVERTISEMENT

ದೇಶ ಬಿಟ್ಟು ತೆರಳಲು ಕೋರಿದ್ದ ಅರ್ಜಿ:ಚೀನಾ ಮಹಿಳೆ ಜಾಮೀನು ಷರತ್ತು ಸಡಿಲಿಸಲು ನಕಾರ

ತಂದೆಯ ಅನಾರೋಗ್ಯ: ದೇಶ ಬಿಟ್ಟು ತೆರಳಲು ಕೋರಿದ್ದ ಅರ್ಜಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 19:40 IST
Last Updated 8 ಜುಲೈ 2024, 19:40 IST
ಹೈಕೋರ್ಟ್‌ 
ಹೈಕೋರ್ಟ್‌    

ಬೆಂಗಳೂರು: ‘ನನ್ನ 80 ವರ್ಷದ ವಯೋವೃದ್ಧ ತಂದೆ ಅನಾರೋಗ್ಯದಿಂದ ನರಳುತ್ತಿದ್ದು, ವಿದೇಶಕ್ಕೆ ತೆರಳಬೇಕಾಗಿದೆ. ಹಾಗಾಗಿ, ನನ್ನ ಜಾಮೀನಿನ ಷರತ್ತುಗಳನ್ನು ಮಾರ್ಪಾಡು ಮಾಡಿ ಅನುಮತಿ ನೀಡಬೇಕು’ ಎಂದು ಕೋರಿದ್ದ ಪವರ್‌ಬ್ಯಾಂಕ್‌ ಹಗರಣದ ಆರೋಪಿಯಾದ ಚೀನಾ ಮಹಿಳೆಯೊಬ್ಬರ ಅರ್ಜಿಯನ್ನು ಹೈಕೋರ್ಟ್‌ ಸಾರಾಸಗಟು ತಿರಸ್ಕರಿಸಿದೆ.

ಈ ಸಂಬಂಧ ವರ್ತೂರು ಹೋಬಳಿ ವೈಟ್‌ಫೀಲ್ಡ್‌ ಮುಖ್ಯರಸ್ತೆಯಲ್ಲಿರುವ ಹ್ಯೂ ಕ್ಸಿಯೊಲಿನ್‌ (42) ಎಂಬ ಚೀನಾದ ಪ್ರಜೆ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ‘ಅರ್ಜಿದಾರರ ವಿರುದ್ಧ ಭಾರತದ ನೆಲದಲ್ಲಿ ಹಲವು ಅಪರಾಧ ಪ್ರಕರಣಗಳ ವಿಚಾರಣೆ ಬಾಕಿ ಇದೆ. ಒಂದೊಮ್ಮೆ ಅವರಿಗೆ ದೇಶದಿಂದ ನಿರ್ಗಮಿಸಲು ಅವಕಾಶ ನೀಡಿದರೆ, ವಿಚಾರಣೆಯನ್ನು ಮುಕ್ತಾಯಗೊಳಿಸುವುದು ಅಸಾಧ್ಯವಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದ ಪ್ರತಿವಾದಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪರ ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಎಚ್.ಶಾಂತಿಭೂಷಣ್‌ ಮಂಡಿಸಿದ, ‘ಪೀಪಲ್ಸ್ ರಿಪಬ್ಲಿಕ್‌ ಆಫ್‌ ಚೀನಾ ಅಪರಾಧಿಕ ಕಾನೂನಿನ ಪ್ರಕಾರ; ಒಬ್ಬ ಚೀನಿಯೇತರ ವ್ಯಕ್ತಿ ಅಲ್ಲಿನ ನೆಲದಲ್ಲಿ ಒಮ್ಮೆ ಆರೋಪಿ ಎಂದು ವಿಚಾರಣೆಗೆ ಒಳಗಾದರೆ ಅಂತಹವರು ಅಲ್ಲಿನ ವಿಚಾರಣೆ ಪೂರ್ಣಗೊಳ್ಳುವತನಕ ಚೀನಾ ದೇಶ ಬಿಟ್ಟು ಹೊರ ಹೋಗುವಂತಿಲ್ಲ. ಇದೇ ಕಾನೂನು ಭಾರತದ ನೆಲದಲ್ಲಿ ಅಪರಾಧ ಎಸಗಿರುವ ಚೀನಾದ ಪ್ರಜೆಗೂ ಅನ್ವಯವಾಗುತ್ತದೆ’ ಎಂಬ ವಾದಂಶವನ್ನು ನ್ಯಾಯಪೀಠ ಎತ್ತಿಹಿಡಿದಿದೆ.

ADVERTISEMENT

‘ಅರ್ಜಿದಾರರರ ವಿರುದ್ಧ ಕರ್ನಾಟಕ ಮತ್ತು ಕೇರಳದ ವಿವಿಧಡೆ ಕ್ರಿಮಿನಲ್‌ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಇನ್ನೂ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಈ ಹಿಂದೆ ಇದೇ ಅರ್ಜಿದಾರರು ಕೋರಿದ್ದ ಮನವಿಯನ್ನು ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್‌ನ ಮತ್ತೊಂದು ನ್ಯಾಯಪೀಠ ತಿರಸ್ಕರಿಸಿಯಾಗಿದೆ. ಈಗ ಅವರು ಮತ್ತೊಂದು ಅರ್ಜಿ ಸಲ್ಲಿಸಿ ತಂದೆಗೆ ಅನಾರೋಗ್ಯ ಎಂದು ಹೊಸ ನೆಪ ಹುಡುಕಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ದೇಶದಿಂದ ಹೊರ ಹೋಗಲು ಅನುಮತಿ ನೀಡಿದರೆ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅನುಮತಿ ನೀಡಿದಂತಾಗಲಿದೆ’ ಎಂಬ ಶಾಂತಿಭೂಷಣ್‌ ವಾದವನ್ನು ನ್ಯಾಯಪೀಠ ಮನ್ನಿಸಿದೆ.

ಪ್ರಕರಣವೇನು?: ‘ನನ್ನ ವಿರುದ್ಧ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಪ್ರಧಾನ ನ್ಯಾಯಾಧೀಶರು 2023ರ ಸೆಪ್ಟೆಂಬರ್ 4ರಂದು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಅಥವಾ ಮಾರ್ಪಾಡು ಮಾಡಿ ಆದೇಶಿಸಬೇಕು’ ಎಂದು ಕೋರಿ ಹ್ಯೂ ಕ್ಸಿಯೊಲಿನ್‌ ಈ ಅರ್ಜಿ ಸಲ್ಲಿಸಿದ್ದರು.

ಪ್ರಾಸಿಕ್ಯೂಷನ್ ಆರೋಪಿಸಿರುವಂತೆ ‌ಹ್ಯೂ ಕ್ಸಿಯೊಲಿನ್‌ 2017ರಲ್ಲಿ ಭಾರತಕ್ಕೆ ಬಂದು, ಕೇರಳದ ಅನಸ್ ಅಹ್ಮದ್ ಅವರನ್ನು ಮದುವೆಯಾಗಿ, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಡುಗೋಡಿಯಲ್ಲಿ ಕಚೇರಿ ಹೊಂದಿರುವ ಮೆಸರ್ಸ್‌ ರೋಜರ್‌ಪೇ ಸಾಫ್ಟ್‌ವೇರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ನೀಡಿರುವ ದೂರಿನಂತೆ ಪವರ್‌ ಬ್ಯಾಂಕ್‌ ಹಗರಣದಲ್ಲಿ ಅನಸ್‌ ಅಹ್ಮದ್‌ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 420 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66ಡಿ ಅನುಸಾರ ಸೈಬರ್‌ ಕ್ರೈಂ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ‌ಹ್ಯೂ ಕ್ಸಿಯೊಲಿನ್‌ ಕೂಡಾ ಆರೋಪಿಯಾಗಿದ್ದು ಬಂಧನಕ್ಕೆ ಒಳಗಾಗಿದ್ದರು. 

ಸೀಮಂತ್‌ ಕುಮಾರ್ ಸಿಂಗ್ ವಿರುದ್ಧದ ವಿಚಾರಣೆ ರದ್ದು

ಬೆಂಗಳೂರು: ಅಧಿಕಾರ ದುರುಪಯೋಗ ಮತ್ತು ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಇತರೆ ಕೆಲ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯ ದಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಸಂಬಂಧ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಏಳು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿರುವ ಕ್ರಮವನ್ನು ರದ್ದುಪಡಿಸಿದೆ. ಆದರೆ, ದೂರು ರದ್ದುಪಡಿಸಲು ನಿರಾಕರಿಸಿದೆ. ‘ಅರ್ಜಿದಾರ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವುದಕ್ಕಾಗಿ ಸಕ್ಷಮ ಪ್ರಾಧಿಕಾರ ಅನುಮತಿ ನೀಡಿದಲ್ಲಿ ವಿಚಾರಣಾ ಪ್ರಕ್ರಿಯೆ ಮುಂದುವರಿಸ ಬಹುದು’ ಎಂದು ಹೇಳಿದೆ.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಪ್ರಕರಣ ದಲ್ಲಿ ಅರ್ಜಿದಾರ ಅಧಿಕಾರಿಗಳು ಎಸಿಬಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ಅವರ ವಿರುದ್ಧ ಅಧಿಕಾರ ದುರ್ಬಳಕೆ, ಕ್ರಿಮಿನಲ್ ದುರ್ನಡತೆ, ಸುಲಿಗೆ ಯತ್ನ, ಮತ್ತು ನಕಲಿ ದಾಖಲೆಗಳ ಸೃಷ್ಟಿ ಆರೋಪದ ಪ್ರಕರಣ ವನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

‘ನಮ್ಮ ವಿರುದ್ಧದ ವಿಚಾರಣೆ ಕಾನೂನುಬಾಹಿರ. ಪ್ರಕರಣ ದಲ್ಲಿ ಪೂರ್ವಾನುಮತಿ ಪಡೆಯದೆ ದೂರನ್ನು ವಿಚಾರಣೆಗೆ ಪರಿಗಣಿಸಲಾಗಿದೆ. ಆದ್ದರಿಂದ ರದ್ದುಗೊಳಿ ಸಬೇಕು’ ಎಂದು ಕೋರಿ ಸೀಮಂತ್ ಕುಮಾರ್ ಸಿಂಗ್, ಎಂ.ಕೆ.ತಿಮ್ಮಯ್ಯ, ಪ್ರಕಾಶ್, ಆರ್.ಎಚ್.ವಿಜಯಾ, ಉಮಾ ಪ್ರಶಾಂತ್, ಎಸ್.ಆರ್.ವೀರೇಂದ್ರ ಪ್ರಸಾದ್, ಮಂಜುನಾಥ್ ಜಿ.ಹೂಗಾರ್ ಈ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.