ಮೈಸೂರು: ‘ಚಲನಚಿತ್ರ ನಟ ದರ್ಶನ್ ಚಿಕಿತ್ಸೆ ಬಳಿಕ ಜೈಲಿಗೆ ಹೋಗಬೇಕು. ಜಾಮೀನು ನೀಡದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದೇವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ದರ್ಶನ್ ಚಿಕಿತ್ಸೆಗೆಂದು ಮೂರು ತಿಂಗಳು ಜಾಮೀನು ಪಡೆದುಕೊಂಡಿದ್ದಾರೆ. ಜಾಮೀನಿನ ಅವಧಿ ವಿಸ್ತರಿಸುವಂತೆ ಕೇಳಿಕೊಂಡಿರುವುದು ನನಗೆ ಗೊತ್ತಿಲ್ಲ. ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಂದುವರಿದಿದ್ದು, ಹೆಚ್ಚುವರಿ ದೋಷಾರೋಪಪಟ್ಟಿ ಸಲ್ಲಿಸುವ ಬಗ್ಗೆ ಮತ್ತಷ್ಟು ಸಾಕ್ಷ್ಯ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಸಾಕ್ಷ್ಯ ಸಂಗ್ರಹದ ಬಳಿಕ ದೋಷಾರೋಪಪಟ್ಟಿ ಸಲ್ಲಿಸಲಾಗುವುದು’ ಎಂದು ಹೇಳಿದರು.
‘ಸಚಿವ ಸಂಪುಟ ಪುನರ್ ರಚನೆ ವಿಚಾರ ನನಗೆ ಗೊತ್ತಿಲ್ಲ. ಅದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಸಚಿವರ ಬದಲಾವಣೆ ವಿಚಾರವೂ ತಿಳಿದಿಲ್ಲ. ಅದೆಲ್ಲವೂ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನವಾಗುತ್ತದೆ. ಸಚಿವ ಜಮೀರ್ ಅಹಮದ್ ಖಾನ್ ಬದಲಾವಣೆ ವಿಚಾರವೂ ಗೊತ್ತಿಲ್ಲ. ಮುಖ್ಯಮಂತ್ರಿಯು ನವದೆಹಲಿಗೆ ತೆರಳಿರುವುದು ಇಲಾಖೆಯ ಕಾರ್ಯಕ್ರಮಕ್ಕೇ ಹೊರತು ಬೇರೆ ಉದ್ದೇಶಕ್ಕಲ್ಲ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.