ADVERTISEMENT

ಬೇಡಿಕೆಯಷ್ಟು ಪೆಟ್ರೋಲ್, ಡೀಸೆಲ್ ಪೂರೈಕೆಗೆ ಆಗ್ರಹ; ಇದೇ 31ಕ್ಕೆ ತೈಲ ಖರೀದಿ ಬಂದ್

ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 26 ಮೇ 2022, 22:20 IST
Last Updated 26 ಮೇ 2022, 22:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ ಕಂಪನಿಗಳ ನಿರ್ವಹಣೆಯಲ್ಲಿನ ವೈಫಲ್ಯದಿಂದ ತೊಂದರೆಗೆ ಸಿಲುಕಿರುವ ಪೆಟ್ರೋಲ್ ಬಂಕ್ ಮಾಲೀಕರು, ಮೇ 31ರಂದು ತೈಲ ಖರೀದಿ ನಿಲ್ಲಿಸುವ ಮೂಲಕ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ (ಎಕೆಎಪ್‌ಪಿಟಿ), ‘ಅವಶ್ಯಕ್ಕೆ ಅನುಗುಣವಾಗಿ ತೈಲ ಪೂರೈಕೆ ಮಾಡದೆ ಬಂಕ್‌ಗಳಲ್ಲಿ ‘ನೋ ಸ್ಟಾಕ್’ ಫಲಕ ಹಾಕುವಂತಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.

‘ಖರೀದಿಸಿದ ಡೀಸೆಲ್‌ಗೆಸಾರಿಗೆ ಸಂಸ್ಥೆಗಳು ಹಣ ಪಾವತಿ ಮಾಡದೆ ಕಂಪನಿಗಳನ್ನು ಸಂದಿಗ್ಧ ಸ್ಥಿತಿಗೆ ತಲುಪಿಸಿವೆ. ಅದರ ಪರಿಣಾಮವನ್ನು ಸಾಮಾನ್ಯ ವಿತರಕರ ಮೇಲೆ ಹೇರಲಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡುತ್ತಿಲ್ಲ. ಸಾಲದ ರೂಪದಲ್ಲಿ ಇಂಧನ ತಂದು ವ್ಯಾಪಾರವಾದ ಬಳಿಕ ಮರು ದಿನ ಹಣ ಪಾವತಿ ಮಾಡುವ ವ್ಯವಸ್ಥೆ ಇತ್ತು. ಈಗ ಮೊದಲೇ ಹಣ ಪಾವತಿಸಿ ಖರೀದಿ ಮಾಡಬೇಕಾದ ಸ್ಥಿತಿ ಇದೆ. ಬ್ಯಾಂಕ್‌ ವಹಿವಾಟು ನಿಧಾನವಾದರೆ ವಿತರಕರು ತೊಂದರೆಗೆ ಸಿಲುಕಬೇಕಾಗುತ್ತಿದೆ. ಹಣ ಪಾವತಿಸಿದರೂ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲ’ ಎಂದು ಒಕ್ಕೂಟದ ಉಪಾಧ್ಯಕ್ಷ ಎ.ತಾರಾನಾಥ್ ಹೇಳಿದರು.

ADVERTISEMENT

‘ತೈಲ ಬೆಲೆ ಏರುಗತಿಯಲ್ಲಿದ್ದಾಗ ಪೈಸೆ ಲೆಕ್ಕದಲ್ಲಿ ಬೆಲೆ ಏರಿಕೆ ಮಾಡಲಾಗುತ್ತದೆ. ಸರ್ಕಾರಕ್ಕೆ ಮನಸ್ಸು ಬಂದಾಗ ಒಮ್ಮೆಗೆ ₹9 ಇಳಿಕೆ ಮಾಡಲಾಗುತ್ತದೆ. ಹಿಂದಿನ ದಿನ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದ ತೈಲವನ್ನು ಕಡಿಮೆ ದರದಲ್ಲೇ ಮರುದಿನ ಮಾರಾಟ ಮಾಡಬೇಕು. ಇತ್ತೀಚೆಗೆ ತೈಲ ದರ ಇಳಿಕೆ ಮಾಡಿದಾಗ ಪ್ರತಿ ವಿತರಕರಿಗೆ ಕನಿಷ್ಠ ₹3 ಲಕ್ಷದಿಂದ ₹30 ಲಕ್ಷದ ತನಕ ನಷ್ಟವಾಗಿದೆ’ ಎಂದರು.

‘2017ರಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದಿಗೆ ಹೋಲಿಕೆ ಮಾಡಿದರೆ ದ್ವಿಗುಣವಾಗಿದೆ. ಕಮಿಷನ್ ಹೆಚ್ಚಳ ಮಾಡಬೇಕೆಂದು ಕೇಂದ್ರ ಪೆಟ್ರೋಲಿಯಂ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಮನವಿ ಮಾಡಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಬಂಕ್‍ಗಳ ಸಿಬ್ಬಂದಿಗೆ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಬೇಕು. ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಇದೆಲ್ಲದರ ಪರಿಣಾಮ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ. ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.

ಖಾಸಗಿ ಪೆಟ್ರೋಲಿಯಂ ಕಂಪನಿಗಳಾದ ಶೆಲ್, ನಾಯರಾ ಪೆಟ್ರೋಲ್‌ ಬಂಕ್‌ಗಳು ಈ ಹೋರಾಟದಲ್ಲಿ ಭಾಗವಹಿಸುತ್ತಿಲ್ಲ. ಅವುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.