ಬೆಂಗಳೂರು: ‘ಶಿಕ್ಷಕಸ್ನೇಹಿ ವರ್ಗಾವಣೆ ನೀತಿ ಹಾಗೂ ಶಾಲೆಗಳಲ್ಲಿ ವಿದ್ಯಾರ್ಥಿಸ್ನೇಹಿ ವಾತಾವರಣ ಕಲ್ಪಿಸುವುದೇ ನಮ್ಮ ಸರ್ಕಾರದ ಆದ್ಯತೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
‘ಪ್ರಜಾವಾಣಿ’’ ಶನಿವಾರ ಏರ್ಪಡಿಸಿದ್ದ ‘ಫೋನ್–ಇನ್ ಕಾರ್ಯಕ್ರಮ’ದಲ್ಲಿ ಅವರು ಶಿಕ್ಷಕರ ಅಹವಾಲುಗಳಿಗೆ ಪ್ರತಿಕ್ರಿಯಿಸಿದರು.
ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಶಿಕ್ಷಕರೂ ತಮ್ಮ ಬವಣೆಗಳನ್ನು ಸಚಿವರ ಜೊತೆ ಹಂಚಿಕೊಂಡರು. 53 ಶಿಕ್ಷಕರ ಕರೆಗಳಿಗೆ ಉತ್ತರಿಸಿದ ಸಚಿವರು, ಪ್ರತಿಯೊಬ್ಬರ ಮಾತನ್ನು ತಾಳ್ಮೆಯಿಂದ ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಕಡ್ಡಾಯ ವರ್ಗಾವಣೆ ನೀತಿ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಲೋಪ, ಶಿಕ್ಷಕರ ವೇತನ ಪಾವತಿ ವಿಳಂಬ ಸೇರಿದಂತೆ ಹತ್ತು ಹಲವು ಪ್ರಮುಖ ಸಮಸ್ಯೆಗಳ ಕುರಿತು ಶಿಕ್ಷಕ– ಶಿಕ್ಷಕಿಯರು ಸಚಿವರ ಗಮನ ಸೆಳೆದರು.
ಜೊತೆಗಿದ್ದ ಅಧಿಕಾರಿಗಳ ತಂಡ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಚಿವರ ಜೊತೆ ಸಮಾಲೋಚನೆ ನಡೆಸಿತು. ಕರೆ ಮಾಡಿದ್ದ ಪ್ರತಿಯೊಬ್ಬರ ಅಹವಾಲುಗಳ ವಿವರವನ್ನು ದಾಖಲಿಸಿಕೊಂಡ ಅಧಿಕಾರಿಗಳು, ಅವುಗಳನ್ನು ಇತ್ಯರ್ಥಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸ್ಥಳದಲ್ಲೇ ಚರ್ಚಿಸಿದರು.
ರಾಜ್ಯದ ಯಾವುದೋ ಮೂಲೆಯಲ್ಲಿರುವ ಶಿಕ್ಷಕರೂ ನೇರವಾಗಿ ಅಹವಾಲು ಹೇಳಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದ್ದಕ್ಕಾಗಿ ಸಚಿವರು ‘ಪ್ರಜಾವಾಣಿ’ಗೆ ಧನ್ಯವಾದ ಸಲ್ಲಿಸಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುರೇಶ್ ಕುಮಾರ್ ಹೊಸಹಳ್ಳಿಯಿಂದ ಎಂ.ಜಿ.ರಸ್ತೆವರೆಗೆ ‘ನಮ್ಮ ಮೆಟ್ರೊ’ದಲ್ಲಿ ಪ್ರಯಾಣಿಸಿದರು. ಮನೆಗೆ ಮರಳುವುದಕ್ಕೂ ‘ನಮ್ಮ ಮೆಟ್ರೊ’ ಬಳಸಿದರು.
ಕಡ್ಡಾಯ ವರ್ಗಾವಣೆ– 11ರಂದು ಸಭೆ
ಒಟ್ಟು ಪ್ರಶ್ನೆಗಳಲ್ಲಿ ಶಿಕ್ಷಕರ ಕಡ್ಡಾಯ ವರ್ಗಾವಣೆ ಕುರಿತ ಪ್ರಶ್ನೆಗಳೇ ಹೆಚ್ಚು ಇದ್ದವು. ಇವುಗಳಿಗೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಕುಮಾರ್, ‘2017ರಲ್ಲೇ ಈ ಕುರಿತು ಕಾಯ್ದೆ ಜಾರಿಗೆ ಬಂದಿದೆ. ಅದರ ಪ್ರಕಾರವೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಕಾಯ್ದೆ ತಿದ್ದುಪಡಿ ಬಗ್ಗೆ ಚರ್ಚಿಸಲು ಸೆ. 11ರಂದು ವಿಧಾನಪರಿಷತ್ ಸದಸ್ಯರ ಸಭೆ ಕರೆದಿದ್ದೇನೆ’ ಎಂದರು.
‘ವರ್ಗಾವಣೆ ಕುರಿತು ಶಿಕ್ಷಕರಲ್ಲೇ ಭಿನ್ನಾಭಿಪ್ರಾಯಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು, ಕಡ್ಡಾಯ ವರ್ಗಾವಣೆ ಬೇಕು ಎನ್ನುತ್ತಾರೆ. ನಗರದಲ್ಲಿ ಕರ್ತವ್ಯ ನಿರ್ವಹಿಸುವವರು ಬೇಡ ಎನ್ನುತ್ತಿದ್ದಾರೆ. ನಾನೀಗ ಮಧ್ಯಮ ಮಾರ್ಗ ಅನುಸರಿಸಬೇಕಾಗಿದೆ’ ಎಂದರು.
ವರ್ಗಾವಣೆ ನೀತಿ ವಿರೋಧಿಸಿ ಕೆಲ ಶಿಕ್ಷಕರು, ಕೌನ್ಸೆಲಿಂಗ್ ಬಹಿಷ್ಕಾರ ಮಾಡುತ್ತಿರುವುದನ್ನು ಗಮನಕ್ಕೆ ತಂದ ಶಿಕ್ಷಕ ಸುನೀಲ್ ಅವರಿಗೆ ವಾಸ್ತವ ಸ್ಥಿತಿ ವಿವರಿಸಿದ ಸಚಿವ, ‘ನಿಮ್ಮ ಮಾತು ಕೇಳಿ ವರ್ಗಾವಣೆಯನ್ನು ಈ ಹಂತದಲ್ಲಿ ಸ್ಥಗಿತಗೊಳಿಸುತ್ತೇನೆ. ಎರಡು ದಿನಗಳ ಮಟ್ಟಿಗೆ ನನ್ನ ಮೊಬೈಲ್ ಕರೆಗಳನ್ನು ನೀವೇ ಸ್ವೀಕರಿಸಿ. ಎಂತೆಂಥ ಕರೆಗಳು ಬರುತ್ತವೆ ಎಂದು ತಿಳಿಯುತ್ತದೆ. ಕರೆ ಮಾಡುವ ಕೆಲವರಿಗೆ ಏಕವಚನ ಹಾಗೂ ಬಹುವಚನದ ವ್ಯತ್ಯಾಸವೇ ಗೊತ್ತಿರುವುದಿಲ್ಲ. ತಂದೆ, ತಾಯಿ, ದೊಡ್ಡಪ್ಪ, ಚಿಕ್ಕಪ್ಪ ಯಾರನ್ನೂ ಬಿಡದೆ ಎಲ್ಲರನ್ನೂ ಕರೆದುಬಿಡುತ್ತಾರೆ’ ಎಂದರು.
50 ವರ್ಷ ಮೀರಿದವರಿಗೆ ವರ್ಗವಿಲ್ಲ?: ’55 ವರ್ಷಕ್ಕೂ ಮೇಲ್ಪಟ್ಟವರನ್ನು ವರ್ಗಾವಣೆ ಮಾಡಿದರೆ ಕಷ್ಟವಾಗುತ್ತದೆ. ಹೀಗಾಗಿಯೇ 50 ವರ್ಷ ಮೇಲ್ಪಟ್ಟವರನ್ನು ವರ್ಗಾವಣೆ ಮಾಡುವುದು ಬೇಡ ಎಂಬ ಆಲೋಚನೆ ನನ್ನದು. ಈ ಬಗ್ಗೆ ಚರ್ಚಿಸಬೇಕಿದೆ’ ಎಂದರು.
‘ಉರ್ದು ಶಿಕ್ಷಕರಿಗೆ ಪ್ರತ್ಯೇಕ ಕೌನ್ಸೆಲಿಂಗ್ ಮಾಡಿ’ ಎಂದು ಒತ್ತಾಯಿಸಿದ ಮೈಸೂರಿನ ಇಲ್ಯಾಸ್ ಅವರ ಕರೆಯನ್ನು ಆಲಿಸಿದ ಸಚಿವ, ‘ಉರ್ದು ಶಿಕ್ಷಕರಿಗೆ ಅನೇಕ ಕಡೆ ಹುದ್ದೆಗಳು ಖಾಲಿ ಇಲ್ಲ. ವಿದ್ಯಾರ್ಥಿಗಳೂ ಇಲ್ಲ. ಉರ್ದು ಶಿಕ್ಷಕರಿಗೆ ಅನ್ಯಾಯ ಆಗುತ್ತಿದೆ ಎನ್ನುತ್ತಿದ್ದೀರಾ. ಆ ಬಗ್ಗೆ ಗಮನ ಹರಿಸುತ್ತೇನೆ’ ಎಂದರು.
ಬಾಗಲಕೋಟೆಯ ಶಿವಲೀಲಾ ಅಂಗಡಿ, ‘ಗಂಡ–ಹೆಂಡತಿ ಇಬ್ಬರೂ ಸರ್ಕಾರಿ ನೌಕರರಾದವರಿಗೆ ಮಾತ್ರ ವರ್ಗಾವಣೆ ನೀತಿ ಅನುಕೂಲವಾಗಿದೆ. ಇದರಿಂದಾಗಿ ಬೇರೆಯವರೆಲ್ಲ ಬಲಿಪಶು ಆಗುತ್ತಿದ್ದಾರೆ’ ಎಂದು ದೂರಿದರು.
‘ವೈದ್ಯನಾಥನ್ ವರದಿ ಜಾರಿ ಪರಿಶೀಲನೆ’
‘ದೈಹಿಕ ಶಿಕ್ಷಣ ಶಿಕ್ಷಕರನ್ನೂ ಇತರ ಸಹಶಿಕ್ಷಕರಂತೆಯೇ ಪರಿಗಣಿಸಬೇಕು ಹಾಗೂ ಅವರಿಗೂ ಬಡ್ತಿ ಅವಕಾಶಗಳು ಸಿಗಬೇಕು ಎಂದು ವೈದ್ಯನಾಥನ್ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ ಅದಿನ್ನೂ ಜಾರಿಯಾಗಿಲ್ಲ. 36 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕನಾಗಿರುವ ನಾನು, ಇನ್ನೆರಡು ವರ್ಷಗಳಲ್ಲಿ ಬಡ್ತಿ ಇಲ್ಲದೆಯೇ ನಿವೃತ್ತಿಯಾಗಲಿದ್ದೇನೆ. ಈ ತಾರತಮ್ಯ ನಿವಾರಿಸಿ’ ಎಂದು ಚಿತ್ರದುರ್ಗದ ಓಂಕಾರಪ್ಪ ಅಳಲು ತೋಡಿಕೊಂಡರು.
ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
‘ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ದೈಹಿಕ ಶಿಕ್ಷಣದ ಪಠ್ಯಪುಸ್ತಕ ಪೂರೈಕೆ ಆಗುತ್ತದೆ. ಆದರೆ ದೈಹಿಕ ಶಿಕ್ಷಣ ಶಿಕ್ಷಕರು ಇರುವುದು 4,500 ಶಾಲೆಗಳಲ್ಲಿ ಮಾತ್ರ’ ಎಂದೂ ಓಂಕಾರಪ್ಪ ಗಮನ ಸೆಳೆದರು.
‘ಅತಿಥಿ ಶಿಕ್ಷಕರ ಸಮಸ್ಯೆ– ಸಿ.ಎಂ. ಜೊತೆ ಚರ್ಚೆ’
‘ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರಿದ್ದಾರೆ. ಅವರ ಕೆಲಸಕ್ಕೆ ಭದ್ರತೆ ಒದಗಿಸಬೇಕು. ಸೇವಾನುಭವ ಆಧಾರದಲ್ಲಿ ವೇತನ ಹೆಚ್ಚಳ ಮಾಡಬೇಕು’ ಎಂದು ಯಾದಗಿರಿಯ ವೆಂಕಟೇಶ್ ಬಸವಲಿಂಗಪ್ಪ, ಸೊರಬದ ಶ್ರೀಕಾಂತ್, ಕೊಪ್ಪಳದ ಮಂಜುಳಾ, ರಾಮದುರ್ಗದ ಶಂಕರ ಪೂಜಾರ ಒತ್ತಾಯಿಸಿದರು.
ಸಚಿವ, ‘ನಿಮ್ಮನ್ನು ಅತಿಥಿ ಶಿಕ್ಷಕರು ಎಂದೇ ತೆಗೆದುಕೊಂಡಿದ್ದು, ಭದ್ರತೆ ನೀಡುವುದು ಹೇಗೆ ಎಂಬುದನ್ನು ಯೋಚಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು’ ಎಂದರು.
‘ಚಿಕ್ಕಮಗಳೂರಿನಲ್ಲಿ ಭ್ರಷ್ಟಾಚಾರ’
‘ಹುದ್ದೆ ಅನುಮೋದನೆ, ಶಾಲಾ ಪರವಾನಗಿ ನವೀಕರಣ ಹಾಗೂ ಶಿಕ್ಷಕರ ಕೆಲಸಗಳನ್ನು ಮಾಡಿಕೊಡಲು ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ. ಆಯಾ ಸೇವೆಗಳಿಗೆ ಇಂತಿಷ್ಟು ಹಣವೆಂದು ನಿಗದಿಪಡಿಸಿದ್ದಾರೆ’ ಎಂದು ಶಿಕ್ಷಕರೊಬ್ಬರು ಆರೋಪಿಸಿದರು.
ಸುರೇಶ್, ‘ನಿಮ್ಮ ಯಾವ ಕೆಲಸಕ್ಕೆ ಹಣ ಕೇಳಿದರು ಎಂಬುದನ್ನು ತಿಳಿಸಿ. ಕಡತದ ಸಂಖ್ಯೆಯನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿ. ಕಡತ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದರು.
‘ಎನ್‌ಪಿಎಸ್ ಸಮಸ್ಯೆ ಶಿಕ್ಷಕರಿಗೆ ಸೀಮಿತವಲ್ಲ’
‘ಎನ್‌ಪಿಎಸ್ ರದ್ದು ಮಾಡಬೇಕು’ ಎಂದು ಅನೇಕ ಶಿಕ್ಷಕರು ಒತ್ತಾಯಿಸಿದರು.
‘ಈ ಸಮಸ್ಯೆ ಕೇವಲ ಶಿಕ್ಷಕರಿಗೆ ಸೀಮಿತವಲ್ಲ. ಎಲ್ಲ ಸರ್ಕಾರಿ ನೌಕರರ ಸಮಸ್ಯೆ. ಈ ಬಗ್ಗೆ ಎಲ್ಲ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಯವರ ಜೊತೆ ಚರ್ಚಿಸುತ್ತೇನೆ ‘ಅಕ್ಕ–ಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಎನ್‌ಪಿಎಸ್ ರದ್ದು ಮಾಡಿ, ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೆ ತಂದಿದ್ದು ಗಮನಕ್ಕೆ ಬಂದಿದೆ’ ಎಂದು ಸಚಿವರು ತಿಳಿಸಿದರು.
‘ರಂಗ ಶಿಕ್ಷಕರ ನೇಮಿಸಿ’
‘ಈ ಹಿಂದೆ ಶಾಲೆಗಳಲ್ಲಿ ರಂಗ ಶಿಕ್ಷಕರನ್ನು ನೇಮಿಸಿಕೊಳ್ಳುವ ಪರಿಪಾಠ ಇತ್ತು. 2001ರ ನಂತರ ಇದು ನಿಂತೇ ಹೋಗಿದೆ. ನಾನು ‘ನೀನಾಸಂ’ನಲ್ಲಿ ತರಬೇತಿ ಪಡೆದು ಕೆಲವು ಶಾಲೆಗಳಲ್ಲಿ ನಾಟಕಗಳ ಕುರಿತು ತರಬೇತಿ ನೀಡುತ್ತಿದ್ದೇನೆ. ರಂಗ ಶಿಕ್ಷಕರ ನೇಮಕಾತಿಯನ್ನು ಮತ್ತೆ ಆರಂಭಿಸಿ’ ಎಂದು ಹೊಳೆನರಸೀಪುರದ ಶಿವಶಂಕರ್ ಒತ್ತಾಯಿಸಿದರು.
‘ರಂಗ ಚಟುವಟಿಕೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದೊಂದು ಉತ್ತಮ ಸಲಹೆ. ಇದನ್ನು ಪರಿಗಣಿಸುತ್ತೇವೆ’ ಎಂದು ಶಿಕ್ಷಣ ಸಚಿವರು ತಿಳಿಸಿದರು.
‘ಗ್ರಾಮೀಣ ಪರಿಹಾರ ಭತ್ಯೆ ನೀಡಿ’
‘ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ನಾಲ್ಕನೇ ಮತ್ತು ಐದನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಗ್ರಾಮೀಣ ಪರಿಹಾರ ಭತ್ಯೆ ನೀಡಲಾಗುತ್ತಿತ್ತು. ಆದರೆ, ಆರನೇ ವೇತನ ಆಯೋಗದಲ್ಲಿ ಇದರ ಬಗ್ಗೆ ಉಲ್ಲೇಖವೇ ಇಲ್ಲ. ಇದನ್ನು ಮತ್ತೆ ಆರಂಭಿಸಬೇಕು’ ಎಂದು ರಾಜ್ಯ ಗ್ರಾಮೀಣ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ನಾಗರಾಜ್ ಒತ್ತಾಯಿಸಿದರು.
ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸುರೇಶ್ ಕುಮಾರ್ ಭರವಸೆ ನೀಡಿದರು.
‘ಫಿಟ್ ಇಂಡಿಯಾ: ದೈಹಿಕ ಶಿಕ್ಷಕರ ನೇಮಕ’
ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದೆ ಎರಡು ದಶಕಗಳೇ ಕಳೆದಿವೆ ಎಂದು ಅನೇಕ ಶಿಕ್ಷಕರು ಸಚಿವರ ಗಮನಕ್ಕೆ ತಂದರು.
‘ಕಾಲಕಾಲಕ್ಕೆ ಶಿಕ್ಷಕರ ನೇಮಕಾತಿ ನಡೆಯುವಂತೆ ನೀತಿ ರೂಪಿಸಲಿದ್ದೇವೆ. ಆ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯನ್ನೂ ಪರಿಗಣಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ‘ಫಿಟ್ ಇಂಡಿಯಾ’ ಕಾರ್ಯಕ್ರಮ ಘೋಷಿಸಿದ್ದಾರೆ. ಅದರ ಅನುಷ್ಠಾನದಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು’ ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
‘ಮಕ್ಕಳೂ ಪರೀಕ್ಷೆ ಬೇಡವೆಂದರೆ?’
‘ಪದವಿ, ಬಿ.ಇಡಿ, ಟಿಇಟಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಿ. ಮತ್ತೆ ಸ್ಪರ್ಧಾತ್ಮಕ ಪರೀಕ್ಷೆ ಬೇಡ’ ಎಂದು ಕೊಪ್ಪಳದ ಯಲಬುರ್ಗಾ ತಾಲ್ಲೂಕಿನ ಆನಂದ್, ವಿಜಯಪುರದ ವಿಜಯಲಕ್ಷ್ಮಿ ಕೋರಿದರು.
ಸುರೇಶ್ ಕುಮಾರ್, ‘ಆಯ್ತು. ಪರೀಕ್ಷೆ ಬೇಡವೆಂದೇ ಇಟ್ಟುಕೊಳ್ಳೋಣ. ಭವಿಷ್ಯದಲ್ಲಿ ಶಾಲಾ ಮಕ್ಕಳೂ ಪರೀಕ್ಷೆ ಬೇಡ ಎಂದು ಹೇಳಿದರೆ ಏನು ಮಾಡುವುದು. ಎಂಬಿಬಿಎಸ್ ವಿದ್ಯಾರ್ಥಿಗಳೂ ಪರೀಕ್ಷೆ ಬೇಡ ಎಂದರೆ ಒಪ್ಪಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ಶಿಕ್ಷಕರ ನೇಮಕಾತಿ ಸಂಬಂಧ ಮಾರ್ಚ್‌ನಲ್ಲೇ ಅಧಿಸೂಚನೆ ಪ್ರಕಟವಾಗಿದ್ದು, ಪರೀಕ್ಷೆ ಸಹ ಮುಗಿದಿದೆ. ಫಲಿತಾಂಶ ಬರುವುದಷ್ಟೇ ಬಾಕಿ ಇದೆ. ಈ ಹಂತದಲ್ಲಿ ನೇಮಕಾತಿ ರದ್ದುಪಡಿಸಿದರೆ ನ್ಯಾಯಾಲಯವೂ ಒಪ್ಪುವುದಿಲ್ಲ’ ಎಂದರು. ‘ಭವಿಷ್ಯದಲ್ಲಿ ಶಿಕ್ಷಕರ ನೇಮಕಾತಿ ನಡೆಸುವಾಗ ನಿಮ್ಮ ಕೋರಿಕೆ ಪರಿಗಣಿಸಲು ಪ್ರಯತ್ನ ಮಾಡುತ್ತೇವೆ’ ಎಂದರು.
‘ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿಯ ಪ್ರತಿ ವಿಷಯದಲ್ಲೂ ಶೇ 50ರಷ್ಟು ಅಂಕ ಪಡೆದಿರಲೇ ಬೇಕು ಎಂಬ ನಿಯಮ ರೂಪಿಸಲಾಗಿದೆ. ಇದನ್ನು ರದ್ದು ಮಾಡಿ’ ಎಂದು ಆಕಾಂಕ್ಷಿಯೊಬ್ಬರು ಹೇಳಿದರು.
ಸಚಿವ, ‘ನಮಗೂ ಒಳ್ಳೆಯ ಶಿಕ್ಷಕರು ಬೇಕು. ನಿಮ್ಮ ಮನವಿಯನ್ನು ಪರಿಶೀಲಿಸುತ್ತೇವೆ’ ಎಂದರು.
‘ಶಿಕ್ಷಕರ ಮಕ್ಕಳೂ ಸರ್ಕಾರಿ ಶಾಲೆಗೆ’
ಹೊಳೆನರಸೀಪುರದ ಪ್ರಮೋದ್, ‘ರಾಜ್ಯದ ಶೇ 90ರಷ್ಟು ಶಿಕ್ಷಕರು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ. ಅವರಿಗೆ ಖಾಸಗಿ ಶಾಲೆಗಳ ಮೇಲೆಯೇ ವ್ಯಾಮೋಹ’ ಎಂದರು.
ಸುರೇಶ್‌ಕುಮಾರ್, ‘ಸರ್ಕಾರಿ ನೌಕರರು, ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕೆಂಬ ನಿಯಮ ಈ ಹಿಂದೆ ಇತ್ತು. ಸರ್ಕಾರಿ ಶಿಕ್ಷಕರ ಮಕ್ಕಳೂ ಇತರೆ ಮಕ್ಕಳ ಜೊತೆಯಲ್ಲೇ ಸರ್ಕಾರಿ ಶಾಲೆಗೇ ಹೋಗಬೇಕು. ಆ ಸಂಬಂಧ ಕಾಯ್ದೆ ರೂಪಿಸುವ ಬಗ್ಗೆ ಪರಿಶೀಲಿಸುತ್ತೇನೆ’ ಎಂದರು.
‘ಸಿಗದ ವಿದ್ಯಾರ್ಥಿವೇತನ’
‘ಶಿಕ್ಷಕರ ಮಗನಾದ ನಾನು, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದೆ. ಹಣವೇ ಬಂದಿಲ್ಲ’ ಎಂದು ಎಂಜಿನಿಯರ್ ವಿದ್ಯಾರ್ಥಿಯಾಗಿರುವ ಪಾವಗಡ ತಾಲ್ಲೂಕಿನ ಪ್ರವೀಣ್ ಕುಮಾರ್ ದೂರಿದರು.
ಸುರೇಶ್, ‘ಒಳ್ಳೆಯ ವಿಷಯವನ್ನೇ ಗಮನಕ್ಕೆ ತಂದಿದ್ದೀರಾ. ಶಿಕ್ಷಕರ ಸೌಲಭ್ಯ ನಿಧಿ ಇದೆ. ನೀವು ಖುದ್ದಾಗಿ ನನ್ನನ್ನು ಭೇಟಿ ಮಾಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.