ADVERTISEMENT

ಸಿಸಿಬಿ ತಾಂತ್ರಿಕ ವಿಭಾಗಕ್ಕೆ ಸಿಬಿಐ ತಂಡ ಭೇಟಿ

ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 18:26 IST
Last Updated 1 ಸೆಪ್ಟೆಂಬರ್ 2019, 18:26 IST

ಬೆಂಗಳೂರು: ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು, ನಗರದ ಅಪರಾಧ ವಿಭಾಗದ (ಸಿಸಿಬಿ) ತಾಂತ್ರಿಕ ವಿಭಾಗಕ್ಕೆ ಭಾನುವಾರ ದಿಢೀರ್ ಭೇಟಿ ನೀಡಿದರು.

ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದ ಸಿಸಿಬಿ ಡಿಸಿಪಿ ಕುಲದೀಪ್‌ ಕುಮಾರ್ ಜೈನ್, ನಗರದ ಸೈಬರ್‌ ಕ್ರೈಂ ಠಾಣೆಗೆ ಈ ಹಿಂದೆಯೇ ದೂರು ನೀಡಿದ್ದಾರೆ. ಅದೇ ದೂರು ಆಧರಿಸಿ ಸಿಬಿಐ ಅಧಿಕಾರಿಗಳು ಪ್ರತ್ಯೇಕ ಎಫ್‌ಐಆರ್‌ ಸಹ ದಾಖಲಿಸಿಕೊಂಡಿದ್ದಾರೆ.

ತನಿಖೆಗಾಗಿ ಸಿಬಿಐ ದೆಹಲಿ ವಲಯದ ಎಸ್ಪಿ ಎಸ್‌.ಕಿರಣ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಆ ತಂಡದ ಅಧಿಕಾರಿಗಳು ಸಿಸಿಬಿಯ ಆಡುಗೋಡಿಯಲ್ಲಿರುವ ತಾಂತ್ರಿಕ ವಿಭಾಗಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು.

ADVERTISEMENT

ಇನ್‌ಸ್ಪೆಕ್ಟರ್‌ಗಳ ವಿಚಾರಣೆ: ‘ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಇನ್‌ಸ್ಪೆಕ್ಟರ್‌ಗಳನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು’ ಎಂದು ಮೂಲಗಳು ತಿಳಿಸಿವೆ.

‘ಫೋನ್‌ ಕದ್ದಾಲಿಕೆ ಮಾಡಲು ಯಾರು ಹೇಳಿದರು? ಅದಕ್ಕೆ ಕಾರಣವೇನು? ಯಾವ ರೀತಿ ಫೋನ್ ಕದ್ದಾಲಿಕೆ ಮಾಡಲಾಯಿತು?... ಸೇರಿದಂತೆ ಹಲವು ಪ್ರಶ್ನೆಗಳಿಗೆ ಅಧಿಕಾರಿಗಳು, ಇನ್‌ಸ್ಪೆಕ್ಟರ್‌ಗಳಿಂದ ಉತ್ತರ ಪಡೆದುಕೊಂಡರು’ ಎಂದೂ ಮೂಲಗಳು ಖಚಿತಪಡಿಸಿವೆ.

ಮಧ್ಯಾಹ್ನದಿಂದ ಸಂಜೆಯವರೆಗೂ ವಿಭಾಗದಲ್ಲಿದ್ದ ಸಿಬಿಐ ಅಧಿಕಾರಿಗಳು, ಅಗತ್ಯಬಿದ್ದರೆ ಪುನಃ ಬರುವುದಾಗಿ ಹೇಳಿ ವಾಪಸು ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.