ಬೆಂಗಳೂರು: ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ತನಿಖಾಧಿಕಾರಿ ಸಲ್ಲಿಸಿದ್ದ ‘ಬಿ’ ವರದಿ ತಿರಸ್ಕರಿಸಿ ಹೊರಡಿಸಿರುವ ಆದೇಶದಲ್ಲಿ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯವು ತನಿಖಾಧಿಕಾರಿ ವಿರುದ್ಧ ಮಾಡಿರುವ ಆರೋಪಗಳನ್ನು ಕೈಬಿಡುವಂತೆ ಕೋರಿ ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
2018ರ ಆಗಸ್ಟ್‌ನಿಂದ 2019ರ ಆಗಸ್ಟ್ ಅವಧಿಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ತಾಂತ್ರಿಕ ಕೋಶದ ಮೂಲಕ ದೂರವಾಣಿ ಕದ್ದಾಲಿಕೆ ನಡೆಸಿರುವ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. 2021ರ ಜೂನ್‌ನಲ್ಲಿ ಕೋರ್ಟ್‌ಗೆ ವರದಿ ಸಲ್ಲಿಸಿದ್ದ ಸಿಬಿಐ ಎಸ್‌ಪಿ ಎಸ್.ಕಿರಣ್, ‘ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಸೇರಿದಂತೆ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಲು ಸಾಕ್ಷ್ಯ ಸಂಗ್ರಹಕ್ಕೆ ಅಡಚಣೆ ಉಂಟಾಗಿದೆ’ ಎಂದು ಉಲ್ಲೇಖಿಸಿ, ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಕೋರಿದ್ದರು.
ಸಿಬಿಐ ಸಲ್ಲಿಸಿದ್ದ ‘ಬಿ’ ವರದಿಯನ್ನು ತಿರಸ್ಕರಿಸಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ 2021ರ ಅಕ್ಟೋಬರ್ 18ರಂದು ಆದೇಶ ಹೊರಡಿಸಿದ್ದ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ, ತನಿಖಾಧಿಕಾರಿ ಕಾರ್ಯನಿರ್ವಹಣೆಯನ್ನು ಕಟುವಾಗಿ ಆಕ್ಷೇಪಿಸಿದ್ದರು. ಟೀಕೆಗಳಿರುವ ಮೂರು ಪ್ಯಾರಾಗಳನ್ನೇ ಆದೇಶದಿಂದ ಕೈಬಿಡು
ವಂತೆ ಸಿಬಿಐ ಹೈಕೋರ್ಟ್‌ಗೆ ಮನವಿ ಮಾಡಿದೆ.
ಮಾರ್ಚ್ 7 ರಂದು ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಲಾಗಿದೆ ಮತ್ತು ಆರೋಪಿಗಳಿಗೆ ಅನುಕೂಲಕರವಾದ ರೀತಿಯಲ್ಲಿ ‘ಬಿ’ ವರದಿ ಸಲ್ಲಿಸಲಾಗಿದೆ ಎಂಬ ವಿಚಾರಣಾ ನ್ಯಾಯಾಲಯದ ಅಭಿಪ್ರಾಯಗಳನ್ನು ಆದೇಶದಿಂದ ತೆಗೆದುಹಾಕುವಂತೆ ಕೋರಿದೆ.
ಯಾವ ಅಂಶ ಕೈಬಿಡಲು ಕೋರಿಕೆ: ‘ಈ ‘ಬಿ’ ವರದಿಯನ್ನು ಗಮನಿಸಿದರೆ ಪೊಲೀಸ್ ಇಲಾಖೆಯಲ್ಲಿನ ಮುಖ್ಯಸ್ಥ
ರೊಬ್ಬರು ಅಧಿಕಾರವನ್ನು ಬಳಸಿಕೊಂಡು ಪ್ರಭಾವ ಬೀರಿ ತಮಗೆ ಅನುಕೂಲಕರವಾಗುವ ರೀತಿಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ
ಯಾಗುವಂತೆ ಮಾಡಿದ್ದಾರೆ.
ಅಲ್ಲದೇ ಆ ಅಧಿಕಾರಿಯು ತನ್ನ ಅಧೀನ ಅಧಿಕಾರಿಯೊಂದಿಗೆ ಶಾಮೀಲಾಗಿ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ಈ ಕೃತ್ಯವು ಭಾರತೀಯ ದಂಡ ಸಂಹಿತೆ ಸೆಕ್ಷನ್ 201ರ ಪ್ರಕಾರ ಅಪರಾಧವಾಗುತ್ತದೆ. ಸಾಕ್ಷ್ಯ ನಾಶ ಮಾಡಿದವರು ಯಾರು? ಇದಕ್ಕೆ ಹೊಣೆ ಯಾರು ಎಂದು ಸರಿಯಾಗಿ ತನಿಖೆ ನಡೆಸಿಲ್ಲ. ತನಿಖಾಧಿಕಾರಿಯೂ ಈ ವಿಚಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕತ್ತಲೆಯಲ್ಲಿರಿಸಿದ್ದಾರೆ’ ಎಂಬ ಅಂಶವನ್ನೇ ಆದೇಶದಿಂದ ಕೈಬಿಡುವಂತೆ ಕೋರಲಾಗಿದೆ.
‘ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ (ಸಿಎಫ್‌ಎಸ್‌ಎಲ್) ವರದಿ ಇನ್ನೂ ಸಲ್ಲಿಕೆಯಾಗಿರಲಿಲ್ಲ. ಸಿಎಫ್‌ಎಸ್‌ಎಲ್ ವರದಿ ಕೈಸೇರುವ ಮುನ್ನವೇ ತರಾತುರಿಯಲ್ಲಿ ‘ಬಿ’ ವರದಿ ಸಲ್ಲಿಸಿದ್ದು, ಇದು ಕಾನೂನು ಸಮ್ಮತವಲ್ಲ. ತನಿಖಾಧಿಕಾರಿಯು ಸಮರ್ಪಕವಾಗಿ ತನಿಖೆ ನಡೆಸಿಲ್ಲ ಎಂಬುದನ್ನು ಇದು ತೋರಿಸುತ್ತದೆ’ ಎಂಬ ಪ್ಯಾರಾವನ್ನೂ ಕೈಬಿಡಬೇಕೆಂಬ ಮನವಿ ಅರ್ಜಿಯಲ್ಲಿದೆ.
‘ತನಿಖಾಧಿಕಾರಿ ಈ ಪ್ರಕರಣದಲ್ಲಿ ಕೆಲವು ಹಿರಿಯ ಅಧಿಕಾರಿಗಳಿಗೆ ಸಹಾಯ ಮಾಡಲು ಮತ್ತು ಅವರಿಂದ ಮೆಚ್ಚುಗೆ ಪಡೆಯುವುದಕ್ಕಾಗಿ ತನಿಖೆಯನ್ನೇ ನಡೆಸದೆ ‘ಬಿ’ ವರದಿ ಸಲ್ಲಿಸಿದ್ದಾರೆ’ ಎಂಬ ಅಭಿಪ್ರಾಯವನ್ನೂ ಕೈಬಿಡುವಂತೆ ತನಿಖಾ ಸಂಸ್ಥೆ ಮನವಿ ಮಾಡಿದೆ.
‘ವಿಚಾರಣಾ ನ್ಯಾಯಾಲಯವು ತನಿಖಾಧಿಕಾರಿಯು ಸಲ್ಲಿಸಿದ ವರದಿ ಮತ್ತು ಪೂರಕ ದಾಖಲೆಗಳನ್ನು ಸರಿ
ಯಾಗಿ ಪರಿಶೀಲಿಸದೇ ಈ ರೀತಿಯ ಅಭಿಪ್ರಾಯವನ್ನು ನೀಡಿದೆ. ತನಿಖಾಧಿಕಾರಿ ಅಥವಾ ತನಿಖಾ ಸಂಸ್ಥೆಗೆ ವರದಿಯಲ್ಲಿನ ವಿಚಾರಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವ, ಸಮರ್ಥಿಸಿಕೊಳ್ಳುವ ಅವಕಾಶವನ್ನೇ ನೀಡದೆ ನ್ಯಾಯಾಧೀ
ಶರು ತಪ್ಪು ಗ್ರಹಿಕೆಯಿಂದ ಹೀಗೇ ಉಲ್ಲೇಖಿಸಿದ್ದಾರೆ. ಈ ಅಭಿಪ್ರಾಯಗಳನ್ನು ಆದೇಶದಿಂದ ತೆಗೆದು ಹಾಕದಿದ್ದರೆ ಸಿಬಿಐ ವರ್ಚಸ್ಸಿಗೆ ಧಕ್ಕೆಯಾಗುತ್ತದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕೋಲಾಹಲ ಸೃಷ್ಟಿಸಿದ್ದ ಪ್ರಕರಣ:
2019 ರಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹುದ್ದೆಯಿಂದ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ, ಬಿ.ಭಾಸ್ಕರ್ ರಾವ್ ಅವರನ್ನು ನೇಮಿಸಲಾಗಿತ್ತು. ಅದೇ ಸಂದರ್ಭದಲ್ಲಿ ಭಾಸ್ಕರ್ ರಾವ್ ಮತ್ತು ಇತರ ವ್ಯಕ್ತಿಗಳ ದೂರವಾಣಿ ಸಂಭಾಷಣೆಯ ತುಣುಕು ಬಹಿರಂಗವಾಗಿತ್ತು. ಇದು ದೂರವಾಣಿ ಕದ್ದಾಲಿಕೆ ನಡೆದಿರುವುದು ಬಹಿರಂಗಗೊಳ್ಳಲು ಕಾರಣವಾಗಿತ್ತು. ಬೆಂಗಳೂರು ನಗರ ಸಿಸಿಬಿ ಪೊಲೀಸರು ಆರಂಭದಲ್ಲಿ ತನಿಖೆ ನಡೆಸಿದ್ದರು. ನಂತರ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.