ಮಂಗಳೂರು: ನಗರದ ಹೊರ ವಲಯದಲ್ಲಿರುವ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗ ಧಾಮದ ಪ್ರಾಣಿ ಸಂಗ್ರಹಾಲಯದೊಳಕ್ಕೆ ಗುರುವಾರ ತಡರಾತ್ರಿ ನಾಯಿಗಳು ದಾಳಿ ನಡೆಸಿ ಹತ್ತು ಕಾಡು ಕುರಿಗಳನ್ನು ಕೊಂದು ಹಾಕಿವೆ. ಐದು ಕಾಡು ಕುರಿಗಳಿಗೆ ಗಾಯಗಳಾಗಿವೆ.
ನಿಸರ್ಗ ಧಾಮದಲ್ಲಿ 40 ಕಾಡು ಕುರಿಗಳಿದ್ದವು. ಅವುಗಳನ್ನು ಒಂದೇ ಕಡೆ ಇರಿಸಲಾಗಿತ್ತು. ಸಮೀಪದ ಜನವಸತಿ ಪ್ರದೇಶಗಳಿಂದ ಐದು ನಾಯಿಗಳು ನಿಸರ್ಗಧಾಮದ ಒಳಕ್ಕೆ ನುಗ್ಗಿವೆ. ಕಾಡು ಕುರಿಗಳಿರುವ ಪ್ರದೇಶ ಪ್ರವೇಶಿಸಿ ದಾಳಿ ಮಾಡಿವೆ.
ಶುಕ್ರವಾರ ಬೆಳಿಗ್ಗೆ 7.30ರ ಸುಮಾರಿಗೆ ನಿಸರ್ಗ ಧಾಮದ ಸಿಬ್ಬಂದಿ ಕರ್ತವ್ಯಕ್ಕೆ ಬಂದ ಬಳಿಕವೇ ದುರ್ಘಟನೆ ನಡೆದ ವಿಷಯ ಗೊತ್ತಾಗಿದೆ.
ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಡಾ.ಜಯಪ್ರಕಾಶ್ ಭಂಡಾರಿ, 'ನಿಸರ್ಗಧಾಮದ ಕಾಂಪೌಂಡ್ ಮೇಲೆ ಒಂದು ಕಡೆ ಮರ ಬಿದ್ದಿದೆ. ಅಲ್ಲಿಂದ ನಾಯಿಗಳು ಒಳಕ್ಕೆ ಬಂದಿವೆ. ಐದು ನಾಯಿಗಳನ್ನು ಸೆರೆಹಿಡಿದು ಸ್ಥಳಾಂತರಿಸಲಾಗಿದೆ' ಎಂದರು. ಪಿಲಿಕುಳದಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಗಾಯಗೊಂಡಿರುವ ಕಾಡು ಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.