ADVERTISEMENT

ಸರ್ಕಾರಿ ಶಾಲೆಯಲ್ಲಿ ‘ಪಿಂಕ್‌ ರೂಮ್’

ಶಾಲೆಯಲ್ಲಿ ಮುಟ್ಟಾದ ಮಗಳ ಸಂಕಟ: ತಂದೆಯಿಂದ ಸೌಲಭ್ಯ ಕಲ್ಪಿಸುವ ಶಪಥ

ಕೆ.ಓಂಕಾರ ಮೂರ್ತಿ
Published 16 ನವೆಂಬರ್ 2024, 0:14 IST
Last Updated 16 ನವೆಂಬರ್ 2024, 0:14 IST
   

ಕೋಲಾರ: ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಮಗಳಿಗೆ ಋತುಸ್ರಾವವಾಗಿ ಪ್ರತ್ಯೇಕ ಕೊಠಡಿ ಅಥವಾ ಇತರ ಸೌಲಭ್ಯ ಇಲ್ಲದೇ ಮುಜುಗರಪಟ್ಟಿದ್ದ ಘಟನೆಯಿಂದ ನೊಂದಿದ್ದ ಬೆಂಗಳೂರಿನ ಅಂಥೋಣಿ ಸಜೀತ್ ಎಂಬ ಐ.ಟಿ ಕಂಪನಿ ಉದ್ಯೋಗಿಯು ಈಗ ಜಿಲ್ಲೆಯ ವಿವಿಧೆಡೆ ಸರ್ಕಾರಿ ಶಾಲೆಗಳಲ್ಲಿ ಪಿಂಕ್ ರೂಮ್ (ಹೆಣ್ಣು ಮಕ್ಕಳಿಗಾಗಿ ವಿಶ್ರಾಂತಿ ಕೊಠಡಿ) ಸ್ಥಾಪಿಸುವ ಕೆಲಸದಲ್ಲಿ ತೊಡಗಿದ್ದಾರೆ.

ತಮ್ಮ ಮಗಳಿಗಾದ ಇಂಥ ತೊಂದರೆ ಮತ್ತೊಬ್ಬ ಹೆಣ್ಣು ಮಗುವಿಗೆ ಆಗಬಾರದೆಂಬ ಆಲೋಚನೆಯಲ್ಲಿ ಸ್ವಂತ ಖರ್ಚು ಹಾಗೂ ಸ್ನೇಹಿತರ‌ ನೆರವಿನಿಂದ ಎರಡು ಸರ್ಕಾರಿ ಪ್ರೌಢಶಾಲೆ ಗಳಲ್ಲಿ ಸ್ಥಾಪಿಸಿರುವ ಪಿಂಕ್ ರೂಮ್ ಸದುಪಯೋಗ ಆಗುತ್ತಿವೆ.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಶಾಲೆ, ಕಾಲೇಜಿಗೆ ತೆರಳಲು ತಮ್ಮ ಗ್ರಾಮಗಳಿಂದ ಬಹಳ ದೂರ ನಡೆಯಬೇಕಾಗುತ್ತದೆ ಇಲ್ಲವೇ ಬಸ್ಸಿನಲ್ಲಿ ಪ್ರಯಾಣಿಸುವ ಅನಿವಾರ್ಯ ಇರುತ್ತದೆ. ಮುಟ್ಟಿನ ಸಂದರ್ಭ ನಿಭಾಯಿಸಲು ಅವರಿಗೆ ಸುರಕ್ಷಿತ, ಖಾಸಗಿ ಸ್ಥಳವೂ ಇಲ್ಲದಿರುವ ಪರಿಸ್ಥಿತಿ ಗ್ರಹಿಸಿ ಈ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

ADVERTISEMENT

ತಾಲ್ಲೂಕಿನ ಮದನಹಳ್ಳಿ ಕ್ರಾಸ್ ಬಳಿ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ವೇಮಗಲ್ ಹೋಬಳಿಯ ಕುರುಗಲ್ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿಯೇ ವಿನೂತನ ವಿಶ್ರಾಂತಿ ಕೊಠಡಿ ಸ್ಥಾಪಿಸಲಾಗಿದೆ. ಈ ಕೊಠಡಿಗಳಲ್ಲಿ ತಲಾ ಒಂದು ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಯ ಶೌಚಾಲಯ, ಉಡುಪು ಬದಲಾಯಿಸುವ ಕೊಠಡಿ, ಸ್ನಾನಗೃಹ, ಕೈ ತೊಳೆಯುವ ಬೇಸಿನ್‌, ಸ್ಯಾನಿಟರಿ ಪ್ಯಾಡ್‌ ಯಂತ್ರ, ಪ್ಯಾಡ್‌ ಸುಡುವ ಯಂತ್ರ, ಎರಡು ಮಂಚ ಹಾಗೂ ಎರಡು ಹಾಸಿಗೆ ವ್ಯವಸ್ಥೆ ಇದೆ. ಓದಲು ಕುರ್ಚಿ, ಟೇಬಲ್‌ ಹಾಗೂ ಪುಸ್ತಕ ಇಡಲಾಗಿದೆ.

ಮದನಪಲ್ಲಿ ಕ್ರಾಸ್‌ ಬಳಿ ಪ್ರೌಢಶಾಲೆಯಲ್ಲಿ ಇದ್ದ ಕಟ್ಟಡವನ್ನೇ ₹2.5 ಲಕ್ಷ ವೆಚ್ಚದಲ್ಲಿ ನವೀಕರಿಸಿ ಸೌಲಭ್ಯ ಕಲ್ಪಿಸಿದ್ದಾರೆ. ಕುರುಗಲ್‌ ಶಾಲೆಯಲ್ಲಿ ₹5.50 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿ ಸೌಲಭ್ಯ ದೊರಕಿಸಿಕೊಟ್ಟಿದ್ದಾರೆ.

ಮತ್ತೊಂದು ಪಿಂಕ್‌ ರೂಮ್‌ ಇಂದು ಉದ್ಘಾಟನೆ

ಎಲ್ಲಾ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಕೊಠಡಿ ಸೌಲಭ್ಯ ಅಗತ್ಯವಿದೆ ಎಂಬ ನಿಟ್ಟಿನಲ್ಲಿ ಆಂಥೋಣಿ ಸಜೀತ್, ಮತ್ತೊಂದು ಪಿಂಕ್‌ ರೂಮ್ ಸ್ಥಾಪಿಸಿದ್ದಾರೆ.

ಕೋಲಾರ ತಾಲ್ಲೂಕಿನ ಕ್ಯಾಲನೂರು ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಜೀತ್‌ ಅವರು ನಿರ್ಮಿಸಿರುವ ಪಿಂಕ್‌ ರೂಮ್‌ ಶನಿವಾರ (ನ.16) ಉದ್ಘಾಟನೆ ಆಗಲಿದೆ. ಜೊತೆಗೆ ಕಂಪ್ಯೂಟರ್ ಲ್ಯಾಬ್ ಕೂಡ ಉದ್ಘಾಟನೆ ಆಗಲಿದೆ.  ₹4 ಲಕ್ಷ ವೆಚ್ಚದಲ್ಲಿ ಶಾಲೆಯ ಕೊಠಡಿಯೊಂದನ್ನು ನವೀಕರಿಸಿ ಸೌಲಭ್ಯ ಕಲ್ಪಿಸಿದ್ದಾರೆ. ಆಂಥೋಣಿ ಕೆಲಸ ಮಾಡುತ್ತಿರುವ ಕಂಪನಿಯು ಸಿಎಸ್‍ಆರ್ ನಿಧಿ ಮೂಲಕ ಸಹಕಾರ ನೀಡುತ್ತಿದೆ.

ಆಂಥೋಣಿ ಅವರು ಕೇರಳದ ಕಲ್ಲಿಕೋಟೆಯವರು. ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ‘ನೀಡುವ ಹೃದಯ ಫೌಂಡೇಶನ್’ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದಾರೆ. 

ವಿದ್ಯಾರ್ಥಿನಿಯರು ತಿಂಗಳ ಋತು ಸಮಯದಲ್ಲಿ ತರಗತಿ ತಪ್ಪಿಸಿಕೊಳ್ಳಬಾರದು. ಬದಲಾಗಿ ಈ ಕೊಠಡಿಯಲ್ಲಿ ವಿಶ್ರಾಂತಿ ಪಡೆದು ಮತ್ತೆ ತರಗತಿಗೆ ಹೋಗಬಹುದು
ಆಂಥೋಣಿ ಸಜೀತ್‌, ಐ.ಟಿ ಕಂಪನಿ ಉದ್ಯೋಗಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.