ಬೆಂಗಳೂರು: ರಾಜ್ಯದಲ್ಲಿ ಕಾರ್ಮಿಕರ ವಿಮಾ ನಿಗಮದಿಂದ (ಇಎಸ್‌ಐ) ಪ್ರತಿ ಜಿಲ್ಲೆಗೆ ಒಂದು ಸುಸಜ್ಜಿತವಾದ ಆಸ್ಪತ್ರೆಯನ್ನು ಆರಂಭಿಸುವ ಚಿಂತನೆ ನಡೆದಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈಗ ಹೆಚ್ಚಿನ ಇಎಸ್‌ಐ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯಗಳಿವೆ. ಆದರೂ, ರೋಗಿಗಳನ್ನು ‘ಎಂ–ಪ್ಯಾನೆಲ್’ ಪಟ್ಟಿಯಲ್ಲಿರುವ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ಇಲಾಖೆಯು ಹೆಚ್ಚಿನ ಮೊತ್ತದ ಚಿಕಿತ್ಸಾ ವೆಚ್ಚ ಭರಿಸುತ್ತಿದೆ. ಇದನ್ನು ತಪ್ಪಿಸಲು ಪ್ರತಿ ಜಿಲ್ಲೆಯಲ್ಲೂ ಆಸ್ಪತ್ರೆ ಆರಂಭಿಸುವ ಯೋಚನೆ ಇದೆ’ ಎಂದರು.
ಸದ್ಯ 180 ಇಎಸ್‌ಐ ಚಿಕಿತ್ಸಾಲಯಗಳಿವೆ. ಅವುಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಮುಂದಿನ ವಾರ ತಾವು ದೆಹಲಿಗೆ ತೆರಳಲಿದ್ದು, ಹೊಸ ಇಎಸ್‌ಐ ಆಸ್ಪತ್ರೆಗಳ ಆರಂಭಕ್ಕೆ ನೆರವು ಕೋರಿ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು.
ನೂತನ ತಾಲ್ಲೂಕುಗಳು ಸೇರಿದಂತೆ 50 ತಾಲ್ಲೂಕುಗಳಲ್ಲಿ ಕಾರ್ಮಿಕ ಇಲಾಖೆಯ ಕಚೇರಿಯನ್ನು ತೆರೆಯಲು ಸಿದ್ಧತೆ ನಡೆದಿದೆ. ಈ ಎಲ್ಲ ತಾಲ್ಲೂಕುಗಳಿಗೂ ಒಬ್ಬ ಅಧಿಕಾರಿಯನ್ನು ನಿಯೋಜನೆ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.