ADVERTISEMENT

ವೃಷಭಾವತಿ ಒಡಲಿಗೆ ಪ್ಲಾಸ್ಟಿಕ್‌ ವಿಷ

ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸ್ಥಳೀಯರು

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 19:45 IST
Last Updated 4 ಜನವರಿ 2020, 19:45 IST
ವೃಷಭಾವತಿ ನದಿ
ವೃಷಭಾವತಿ ನದಿ   

ಬೆಂಗಳೂರು: ವೃಷಭಾವತಿ ನದಿಯನ್ನು ಪುನರುಜ್ಜೀವನಗೊಳಿಸಲು ನಾಗರಿಕರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ, ಈ ನದಿಯ ಒಡಲಿಗೆ ಪ್ಲಾಸ್ಟಿಕ್‌ ತ್ಯಾಜ್ಯದ ವಿಷ ಹರಿಸುವ ಕಾರ್ಯ ಸದ್ದಿಲ್ಲದೆ ಸಾಗಿದೆ.

ಕುಂಬಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹರಿಯುವ ಈ ನದಿಯ ದಡದಲ್ಲಿ ಪ್ಲಾಸ್ಟಿಕ್‌ ವಿಂಗಡಣೆ ಮತ್ತು ಸಂಸ್ಕರಣೆ ಮಾಡುವ ಹಲವು ಘಟಕಗಳು ತಲೆ ಎತ್ತಿವೆ. ಆರು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿರುವ ಈ ಘಟಕಗಳಲ್ಲಿ ರಾತ್ರಿ ವೇಳೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸುಡಲಾಗುತ್ತದೆ. ಇದರಿಂದ ಡಯಾಕ್ಸಿನ್‌ನಂತಹ ವಿಷಕಾರಕ ಅನಿಲಗಳು ವಾತಾವರಣವನ್ನು ಸೇರುತ್ತಿದ್ದು, ರಾತ್ರಿಯ ವೇಳೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.

ಕಂಬಿಪುರ ಗ್ರಾಮ ಮತ್ತು ಸುತ್ತ–ಮುತ್ತಲಿನಲ್ಲಿ ವಾಸವಾಗಿರುವ ನಿವಾಸಿಗಳು ಈ ಕುರಿತು ದೂರು ಸಲ್ಲಿಸಿದ್ದಾರೆ. ಪ್ರಮುಖವಾಗಿ ಗುಡ್‌ ಅರ್ತ್‌ ಮಲ್ಹಾರ್ ಬಡಾವಣೆ ನಿವಾಸಿಗಳು ಕುಂಬಳಗೋಡು ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದು, ಈ ಘಟಕಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯ ಮಾಡಿದ್ದಾರೆ.

ADVERTISEMENT

‘ಹಲವು ಲಾರಿ ಮತ್ತು ಟ್ರ್ಯಾಕ್ಟರ್‌ಗಳು ಪ್ಲಾಸ್ಟಿಕ್‌ ತ್ಯಾಜ್ಯವನ್ನು ತಂದು ನದಿಯ ದಡದಲ್ಲಿ ಸುರಿಯುತ್ತಿರುವುದನ್ನು ಗಮನಸಿದ್ದೇವೆ. ಪ್ಲಾಸ್ಟಿಕ್‌ ತೊಳೆಯುವಾಗ ವಿಷಕಾರಕ ರಾಸಾಯನಿಕಗಳು ನದಿಯ ಒಡಲನ್ನು ಸೇರುತ್ತಿವೆ. ವಿಂಗಡಿಸಿದ ತ್ಯಾಜ್ಯವನ್ನು ರಾತ್ರಿಯ ವೇಳೆ ಸುಡಲಾಗುತ್ತಿದೆ. ಇದರಿಂದ ನಮಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ’ ಎಂದು ನಿವಾಸಿಯೊಬ್ಬರು ದೂರಿದರು.

ಈ ಕುರಿತು ಪ್ರತಿಕ್ರಿಯಿಸಿದ ಕುಂಬಳಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಿಕ್ಕರಾಜು, ‘ನದಿಯ ದಡದಲ್ಲಿ ಪ್ಲಾಸ್ಟಿಕ್‌ ಸಂಸ್ಕರಣ ಘಟಕಗಳು ತಲೆ ಎತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ನಿವಾಸಿಗಳು ನನ್ನ ಗಮನಕ್ಕೆ ತಂದರೆ, ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಪಿಡಿಒ ಜಿ.ಬಿ. ಬಸವರಾಜು, ‘ಗುಡ್‌ ಅರ್ತ್‌ ಮಲ್ಹಾರ್‌ ಬಡಾವಣೆ ನಿವಾಸಿಗಳು ಈ ಬಗ್ಗೆ ದೂರು ನೀಡಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.