ಬೆಂಗಳೂರು: ಕಡಲನ್ನು ಸೇರುತ್ತಿರುವ ಮತ್ತು ಕಡಲ ತೀರವನ್ನು ಆವರಿಸಿರುವ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರವನ್ನು ಸೇರದಂತೆ ತಡೆಯುವ ಮತ್ತು ಪಶ್ಚಿಮಘಟ್ಟದ ಜೀವವೈವಿಧ್ಯ ಸಂರಕ್ಷಿಸುವ ನಿಟ್ಟಿನಲ್ಲಿ ವಿಶ್ವಬ್ಯಾಂಕ್‌ನ ಕೆ.ಶೋರ್–ಬ್ಲೂ ಪ್ಯಾಕ್ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಿರಿಯ ಪರಿಸರ ಅರ್ಥಶಾಸ್ತ್ರಜ್ಞ ಮತ್ತು ಕಾರ್ಯಗುಂಪಿನ ನಾಯಕ ಪಾಬ್ಲೋ ಸಿ.ಬೆನಿಟೆಜ್ ನೇತೃತ್ವದ ವಿಶ್ವಬ್ಯಾಂಕ್ ನಿಯೋಗದೊಂದಿಗೆ ಸಚಿವರು ತಮ್ಮ ಕಚೇರಿಯಲ್ಲಿ ಮಂಗಳವಾರ ಚರ್ಚೆ ನಡೆಸಿದರು.
ಒಟ್ಟು 317 ಕಿ.ಮೀ ಕರಾವಳಿ ತೀರದಲ್ಲಿ ಪ್ರತಿ ನಿತ್ಯ 50 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಿಂದ ಸಮುದ್ರ ತಟಕ್ಕೆ ಬಂದು ಮೊಟ್ಟೆ ಇಟ್ಟು ಮರಿ ಮಾಡುವ ಆಮೆ ಮೊದಲಾದ ಜಲಚರಗಳ ಸಂತಾನೋತ್ಪತ್ತಿಗೆ ಕಂಟಕವಾಗಿದೆ. ಇದು ಆಘಾತಕಾರಿ ಬೆಳವಣಿಗೆ ಎಂದು ಖಂಡ್ರೆ ಹೇಳಿದರು.
ಜೀವ ಸಂಕುಲದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ ಎಂದು ಪ್ರತಿಪಾದಿಸಿದ ಸಚಿವರು, ರಾಜ್ಯದ ಕರಾವಳಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಆಗುತ್ತಿರುವ ದುಷ್ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿ ಆಗಬಹುದು ಎಂದು ತಿಳಿಸಿದರು.
ಮೀನುಗಾರಿಕೆಗೆ ವಿರಾಮವಿದ್ದ ವೇಳೆಯಲ್ಲಿ ಕಡಲ ತಡಿಯಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯ ತೆರವು ಮಾಡಬಹುದು. ಮೀನು ಹಿಡಿಯುವುದಕ್ಕಿಂತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವೇ ಮೀನುಗಾರರಿಗೆ ಹೆಚ್ಚು ಲಾಭದಾಯಕ ಆಗುತ್ತದೆ ಎಂದು ನಿಯೋಗದ ಸದಸ್ಯರು ಅಭಿಪ್ರಾಯಪಟ್ಟರು.
ಬ್ಲೂಪ್ಯಾಕ್ ಯೋಜನೆಯ ಮೊತ್ತ ಒಟ್ಟು ₹840 ಕೋಟಿ ಆಗಿದ್ದು, ಇದರಲ್ಲಿ ಶೇ 70 ರಷ್ಟನ್ನು ವಿಶ್ವಬ್ಯಾಂಕ್ ಸಾಲದ ರೂಪದಲ್ಲಿ ನೀಡಲಿದೆ. ರಾಜ್ಯ ಸರ್ಕಾರ ಶೇ 30 ರಷ್ಟು ಭರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಸಭಗೆ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.