ADVERTISEMENT

‘ಆಪರೇಷನ್‌ ಕಮಲ’ಕ್ಕೆ ಸಂಚು: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಶಾಸಕರಿಗೆ ದುಡ್ಡಿನ ಆಮಿಷ: ನನ್ನ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 22:30 IST
Last Updated 30 ಆಗಸ್ಟ್ 2024, 22:30 IST
<div class="paragraphs"><p>ಹಾವೇರಿ ಜಿಲ್ಲೆಯ ಸುಕ್ಷೇತ್ರ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳಾರತಿ ಪಡೆದುಕೊಂಡರು.</p></div>

ಹಾವೇರಿ ಜಿಲ್ಲೆಯ ಸುಕ್ಷೇತ್ರ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳಾರತಿ ಪಡೆದುಕೊಂಡರು.

   

ಬೆಂಗಳೂರು/ ಹುಬ್ಬಳ್ಳಿ: ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಬೀಳಿಸುತ್ತಿರುವ ಬಿಜೆಪಿ, ರಾಜ್ಯದಲ್ಲೂ ಅಂತಹ ಸಾಹಸಕ್ಕೆ ಕೈಹಾಕಿದೆ. ಆಪರೇಷನ್ ಕಮಲಕ್ಕೆ ಮತ್ತೆ ಸಂಚು ನಡೆಸುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್‌ನ ಶಾಸಕರಿಗೆ ದುಡ್ಡಿನ ಆಮಿಷ ಒಡ್ಡುತ್ತಿದೆ. ಆಪರೇಷನ್‌ ಕಮಲ ಮಾಡಿಯೇ ಬಿಜೆಪಿ 2008, 2019ರಲ್ಲಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿತ್ತು. ಜನರ ಆಶೀರ್ವಾದದಿಂದ ಎಂದೂ ಅಧಿಕಾರ ಪಡೆಯದ ಬಿಜೆಪಿ ನಾಯಕರು ಈಗಲೂ ಅಂತಹ ಪ್ರಯತ್ನಕ್ಕೆ ಕೈಹಾಕಿದ್ದಾರೆ’ ಎಂದು ಅವರು ಆಪಾದಿಸಿದರು.

ADVERTISEMENT

‘ವಿಧಾನಸಭಾ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸಿ, 136 ಶಾಸಕರನ್ನು ಗೆಲ್ಲಿಸಿಕೊಂಡಿರುವ ಕಾಂಗ್ರೆಸ್‌ ಸರ್ಕಾರವನ್ನು ಅಭದ್ರಗೊಳಿಸುವುದು ಸುಲಭದ ಮಾತಲ್ಲ. ಅಂತಹ ಆಸೆಗೆ ಪಕ್ಷದ ಶಾಸಕರು ಎಂದೂ ಬಲಿಯಾಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಶಾಸಕ ರವಿ ಗಣಿಗ ಅವರೂ ಈ ಕುರಿತು ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಬಿಜೆಪಿ ನಿರಂತರ ಪ್ರಯತ್ನ ಮಾಡುತ್ತಿದೆ. ಶಾಸಕರು ಒಪ್ಪದೇ ಇರುವುದರಿಂದ ಬಿಜೆಪಿ, ಜೆಡಿಎಸ್‌ ಪಕ್ಷಗಳೆರಡೂ ಸೇರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆರೋಪ ಹೊರಿಸುತ್ತಿದ್ದಾರೆ. ರಾಜ್ಯಪಾಲರನ್ನು ಬಳಸಿಕೊಂಡು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದ್ದಾರೆ’ ಎಂದು ದೂರಿದರು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಸಿದ್ದರಾಮಯ್ಯ, ‘ಹಿಂದುಳಿದ ಸಮಾಜದ ನಾನು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ. ಜನರ ಆಶೀರ್ವಾದ ಇರುವವರೆಗೂ ನನಗೆ ಯಾರೂ ಏನೂ ಮಾಡಲಾಗುವುದಿಲ್ಲ’ ಎಂದು ಬಿಜೆಪಿ–ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದರು.

‘ನನ್ನ ವಿರುದ್ಧ ನಡೆಯುತ್ತಿರುವ ಬಿಜೆಪಿ–ಜೆಡಿಎಸ್ ನಾಯಕರು ನಡೆಸುತ್ತಿರುವ ಸೇಡು ಹಾಗೂ ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ’ ಎಂದು ನೆರೆದಿದ್ದ ಜನಸ್ತೋಮಕ್ಕೆ ಕರೆ ನೀಡಿದ ಸಿದ್ದರಾಮಯ್ಯ, ‘ಹೊಟ್ಟೆಕಿಚ್ಚಿನಿಂದ ಅವರೇ ನಾಶ ಆಗುತ್ತಾರೆಯೇ ಹೊರತು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂದು ಗುಡುಗಿದರು.

‘ನಾನು ಯಾವುದೇ ಪಿತೂರಿ-ಷಡ್ಯಂತ್ರಕ್ಕೂ ಭಯ ಪಡುವವನಲ್ಲ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಗೆರಿಲ್ಲಾ ಸೇನಾನಿ ರಾಯಣ್ಣನನ್ನು ಬ್ರಿಟಿಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ. ಇಂಥ ದೇಶದ್ರೋಹಿಗಳು ನಮ್ಮೊಳಗೆ ಈಗಲೂ ಇದ್ದಾರೆ. ಇಂಥ ದೇಶದ್ರೋಹಿಗಳು ಎಲ್ಲಾ ಕಾಲದಲ್ಲೂ ಇರುತ್ತಾರೆ. ಇಂಥವರನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು, ಸೋಲಿಸಬೇಕು’ ಎಂದು ಕರೆ ನೀಡಿದರು.

ಸಚಿವರಿಂದ ರಾಜಭವನ ಚಲೋ

ತಮ್ಮ ಮುಂದೆ ಬಾಕಿ ಇರುವ ಇತರ ಪ್ರಕರಣಗಳಲ್ಲೂ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಒತ್ತಾಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಶನಿವಾರ (ಆ.31) ರಾಜಭವನ ಚಲೋ ನಡೆಸಲಿದ್ದಾರೆ. ಬೆಳಿಗ್ಗೆ 10ಕ್ಕೆ ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಎಲ್ಲ ಸಚಿವರು, ಶಾಸಕರು ಸೇರಲಿದ್ದಾರೆ. ಅಲ್ಲಿಂದ ಪಾದಯಾತ್ರೆ ಮೂಲಕ ರಾಜಭವನದ ಕಡೆ ನಡೆಯಲಿದ್ದಾರೆ.

‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ ನಿರಾಣಿ, ಶಾಸಕರಾದ ಶಶಿಕಲಾ ಜೊಲ್ಲೆ ಮತ್ತು ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೆಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಹಾಗೂ ಹಾಗೂ ಕೆಲವರ ವಿರುದ್ಧ ತನಿಖೆಗೆ ಅನುಮತಿ ಕೋರಿ ವಿವಿಧ ತನಿಖಾ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಿವೆ. ಅವುಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದ ರಾಜ್ಯಪಾಲರು, ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ’ ಎಂದು ದೂರಿರುವ ಕಾಂಗ್ರೆಸ್ ನಾಯಕರು, ರಾಜ್ಯಪಾಲರು ತಮ್ಮ ಮುಂದಿರುವ ಎಲ್ಲ ಪ್ರಕರಣ
ಗಳಲ್ಲೂ ತನಿಖೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ರಾಜಭವನದ ಕಡೆಗೆ ಹೆಜ್ಜೆ ಹಾಕಲಿದ್ದಾರೆ.

ರಿಟ್ ಅರ್ಜಿ ವಿಚಾರಣೆ ಇಂದು

ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ನೀಡಿರುವ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿರುವ ರಿಟ್‌ ಅರ್ಜಿಯ ಮುಂದುವರಿದ ವಿಚಾರಣೆ ಶನಿವಾರ ನಡೆಯಲಿದ್ದು, ನ್ಯಾಯಪೀಠವು ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಗುರುವಾರ ವಿಚಾರಣೆ ನಡೆಸಿದ್ದರು. ಮುಖ್ಯಮಂತ್ರಿ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು. ರಾಜ್ಯಪಾಲರ ಪರ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದ ಮಂಡನೆ ಬಾಕಿ ಇದೆ.

ಬೆಳಿಗ್ಗೆ 10ಗಂಟೆಗೆ ವಿಚಾರಣೆ ಶುರುವಾಗಲಿದ್ದು, ಸಿದ್ದರಾಮಯ್ಯನವರ ಅರ್ಜಿಯ ಭವಿಷ್ಯ ಇಂದೇ ನಿರ್ಧಾರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.