ಮೈಲಾರ (ವಿಜಯನಗರ ಜಿಲ್ಲೆ) : ‘ಕುರುಬ ಸಮುದಾಯವನ್ನು ಎಸ್‌ಟಿ ಮೀಸಲು ಪಟ್ಟಿಗೆ ಸೇರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಡಬಲ್ ಎಂಜಿನ್ ಸರ್ಕಾರ ಎಂದು ಬೀಗುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಬಳಿ ಕುಳಿತು ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಭಾನುವಾರ ಕಾಗಿನೆಲೆ ಕನಕಗುರುಪೀಠದ ಶಾಖಾ ಮಠದಲ್ಲಿ ನೂತನ ಗಂಗಮಾಳಮ್ಮ ಯಾತ್ರಿ ನಿವಾಸ ಉದ್ಘಾಟಿಸಿ ಅವರು ಮಾತನಾಡಿದರು.
‘ಬೀದರ್, ಕಲಬುರಗಿ, ಯಾದಗಿರಿ, ಕೊಡಗು ಜಿಲ್ಲೆಯ ಕುರುಬರನ್ನು ಎಸ್‌ಟಿಗೆ ಸೇರಿಸುವಂತೆ ನಾವು ಈ ಹಿಂದೆಯೇ ಶಿಫಾರಸು ಮಾಡಿದ್ದೇವೆ. ಕೇಂದ್ರ ಸರ್ಕಾರ ಇನ್ನೂ ಪರಿಗಣಿಸಿಲ್ಲ’ ಎಂದರು.
ರಾಜೀನಾಮೆಗೆ ಸಿದ್ಧ:
‘ಕೇಂದ್ರ ಸರ್ಕಾರ ಸಂವಿಧಾನ ಬಾಹಿರವಾಗಿ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ನೀಡಿದೆ. ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬಹುದೆಂದು ಸಂವಿಧಾನದ ಪರಿಚ್ಛೇದ 15, 16ರಲ್ಲಿ ಉಲ್ಲೇಖಿಸಲಾಗಿದೆ. ಮೇಲ್ಜಾತಿಯ ಬಡವರಿಗೂ ಮೀಸಲಾತಿ ಕೊಡಬಹುದು ಎಂದು ಎಲ್ಲೂ ಹೇಳಿಲ್ಲ. ಅದನ್ನು ಸಾಬೀತುಪಡಿಸಿದರೆ ನಾನು ರಾಜೀನಾಮೆ ನೀಡಲು ಸಿದ್ದ’ ಎಂದು ಸವಾಲೆಸೆದರು.
ಮೇಲ್ವರ್ಗಗಳಿಗೆ ಸಂವಿಧಾನ ಬಾಹಿರವಾಗಿ ಮಿಸಲಾತಿ ಘೋಷಿಸಿದರೂ ಯಾರೊಬ್ಬರೂ ಪ್ರಶ್ನೆ ಮಾಡಲಿಲ್ಲ. ನಾನು ರಾಜಕೀಯದಲ್ಲಿದ್ದೇನೆ. ಇದನ್ನೆಲ್ಲ ನಾನು ಹೇಳಬಾರದು. ಆದ್ರೂ ಹೇಳುತ್ತಿರುವೆ. ಹಿಂದುಳಿದ ಸಮುದಾಯಗಳ ಜನರು, ಮಠಾಧೀಶರು ಇಂಥ ಸೂಕ್ಷ್ಮ ವಿಚಾರಗಳನ್ನು ಅರ್ಥ ಮಾಡಿಕೊಂಡು ಧ್ವನಿ ಎತ್ತಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಹಿಂದೂ ಮತ್ತು ಹಿಂದುತ್ವ ಬೇರೆ ಎಂದು ವ್ಯಾಖ್ಯಾನಿಸಿದ್ದಾರೆ. ವಿವೇಕಾನಂದರನ್ನು ಪೂಜಿಸುವವರು, ಆರಾಧಿಸುವವರು ಅವರ ವಿಚಾರಧಾರೆಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಟೀಕಿಸಿದರು.
ಮಾಜಿಸಚಿವ ಎಚ್.ಎಂ. ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈಶ್ವರಾನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಪುರುಷೋತ್ತಮನಂದಪುರಿ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕ, ಭೀಮ ನಾಯ್ಕ, ಶ್ರೀನಿವಾಸ ಮಾನೆ, ಎಸ್.ರಾಮಪ್ಪ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.