ಕೋಲಾರ: ‘ಈಶ್ವರನ ಕೊರಳಿಗೆ ಸರ್ಪ ಶೋಭಾಯಮಾನ ಉಂಟು ಮಾಡಿದೆ. ಈ ದೇಶದ ಜನರು ನನಗೆ ಈಶ್ವರ ಸ್ವರೂಪಿಗಳು. ಹಾವಾಗಿ ಅವರ ಕೊರಳಲ್ಲಿ ಸುತ್ತಿಕೊಳ್ಳಲು ನನಗೆ ಯಾವುದೇ ದುಃಖ ಇಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ರಾಷ್ಟ್ರೀಯ ಹೆದ್ದಾರಿ–75ರ ಕೆಂದಟ್ಟಿ ಗೇಟ್ ಬಳಿ ಬಿಜೆಪಿ ಭಾನುವಾರ ಆಯೋಜಿಸಿದ್ದ ವಿಧಾನಸಭೆ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಅವರು ಕಾರ್ಯಕರ್ತರ ಭೋರ್ಗರತೆದ ನಡುವೆ ಆವೇಶಭರಿತರಾಗಿ ಮಾತನಾಡಿದರು. ತಮ್ಮ ಭಾಷಣದ ಬಹುತೇಕ ಸಮಯವನ್ನು ಕಾಂಗ್ರೆಸ್ ಟೀಕಿಸಲು ವಿನಿಯೋಗಿಸಿದರು.
‘ಭ್ರಷ್ಟಾಚಾರ ವಿರುದ್ಧದ ನನ್ನ ಹೋರಾಟವನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ನವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ನನ್ನ ವಿರುದ್ಧ ಪ್ರಹಾರ ಮಾಡುತ್ತಿದ್ದಾರೆ. ನನಗೆ ಬೆದರಿಕೆ ಹಾಕುತ್ತಿದ್ದು, ವಿಷದ ಹಾವಿಗೆ ಹೋಲಿಸಿದ್ದಾರೆ. ಈ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ, ಸಂತೋಷದಿಂದಲೇ ಸ್ವೀಕರಿಸುತ್ತೇನೆ.‘ ಎಂದರು.
‘ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರ ಬಿಟ್ಟು ವಿಷದ ಹಾವಿನ ಬಗ್ಗೆ ಚರ್ಚಿಸುತ್ತಿದ್ದಾರೆ. ಇದು ಕರ್ನಾಟಕದ ಸಂಸ್ಕಾರವೇ?. ಮೇ 10ರಂದು ಜನರು ಕಾಂಗ್ರೆಸ್ ವಿರುದ್ಧವಾಗಿ ವೋಟು ಹಾಕುವ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.