ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ | ಮೋದಿ, ಗೌಡರ ಕುಟುಂಬವೇ ಹೊಣೆ: ಡಿ.ಕೆ. ಸುರೇಶ್‌

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 14:17 IST
Last Updated 30 ಏಪ್ರಿಲ್ 2024, 14:17 IST
ಡಿ.ಕೆ. ಸುರೇಶ್
ಡಿ.ಕೆ. ಸುರೇಶ್   

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ನಡೆಸಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ದೇಶದಲ್ಲೇ ಅತಿ ದೊಡ್ಡದು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಕುಟುಂಬ ನೇರ ಹೊಣೆ ಎಂದು ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಆರೋಪಿಸಿದರು.

‘ಡಿ.ಕೆ. ಶಿವಕುಮಾರ್‌ ಮತ್ತು ಡಿ.ಕೆ. ಸುರೇಶ್‌ ಅವರಿಗೆ ಮೊದಲೇ ಈ ಪ್ರಕರಣದ ಮಾಹಿತಿ ಇತ್ತು’ ಎಂಬ ಜೆಡಿಎಸ್‌ ನಾಯಕರ ಆರೋಪಗಳ ಕುರಿತು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಹಾಸನದ ಬಿಜೆಪಿ ನಾಯಕ ದೇವರಾಜೇಗೌಡ ಈ ಬಗ್ಗೆ ಅವರ ಪಕ್ಷದ ನಾಯಕರಿಗೆ ಪತ್ರ ಬರೆದಿದ್ದರು. ಪ್ರಧಾನಿ, ಅವರ ಸಚಿವಾಲಯ, ದೇವೇಗೌಡರ ಕುಟುಂಬಕ್ಕೆ ಎಲ್ಲವೂ ಗೊತ್ತಿತ್ತು. ಆದರೂ ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್‌ ಅವರನ್ನು ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಕನ್ನಡಿಗರು ಮತ್ತು ಹಾಸನ ಜಿಲ್ಲೆಯ ಮಾನ ಕಳೆದರು’ ಎಂದರು. 

‘ಈ ಬಗ್ಗೆ ಹಾಸನದಲ್ಲಿ ಗುಸು ಗುಸು ಸುದ್ದಿ ಹಬ್ಬಿತ್ತು. ದಾಖಲೆಗಳು ಇಲ್ಲದೇ ಮಾತನಾಡವುದು ಸೂಕ್ತವಲ್ಲ. ನಮಗೆ ವಿಷಯ ಗೊತ್ತಿದ್ದರೆ ಈ ಪ್ರಕರಣ ಇನ್ನೂ ಮುಂಚೆಯೇ ಹೊರಬರುತ್ತಿತ್ತು. ಆರೋಪ ಮಾಡುವುದಕ್ಕಾಗಿಯೇ ನಮ್ಮ ಹೆಸರನ್ನು ಎಳೆದು ತರಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಪ್ರಜ್ವಲ್‌ ಮಾಜಿ ಪ್ರಧಾನಿಯವರ ಕುಟುಂಬದ ಸದಸ್ಯ. ಈಗ ನಮ್ಮ ಕುಟುಂಬದ ಸದಸ್ಯರಲ್ಲ ಎಂದು ಹೇಳಬಹುದು. ಲೋಕಸಭಾ ಚುನಾವಣಾ ಪ್ರಚಾರದಲ್ಲೇ ಕುಮಾರಸ್ವಾಮಿ ಅವರು ಪ್ರಜ್ವಲ್‌ ನನ್ನ ಮಗ ಎಂದಿಲ್ಲವೆ? 500ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಇಂತಹ ಘೋರ ಕೃತ್ಯದ ಬಗ್ಗೆ ಮಾಹಿತಿ ಇದ್ದರೂ ಮುಚ್ಚಿಟ್ಟಿರುವುದು ಆ ಕುಟುಂಬದ ಮಹಾಪರಾಧ’ ಎಂದು ಸುರೇಶ್ ದೂರಿದರು.

‘ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಇದೊಂದು ದೊಡ್ಡ ಪ್ರಕರಣ. ಕರ್ನಾಟಕದಿಂದ ದೆಹಲಿಯವರೆಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪಗಳಿವೆ. ತನಿಖೆಯ ಅವಧಿಯಲ್ಲಿ ಸಂತ್ರಸ್ತ ಮಹಿಳೆಯರಿಗೆ ಸರ್ಕಾರ ರಕ್ಷಣೆ ಒದಗಿಸಬೇಕು. ತಕ್ಷಣವೇ ಆ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.