ADVERTISEMENT

ಕೃಷಿ ಕಾಯ್ದೆಗಳ ರದ್ದತಿಗೆ ಕೇಂದ್ರದ ನಿರ್ಧಾರ: ರಾಜ್ಯದ ರೈತ ಮುಖಂಡರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 8:46 IST
Last Updated 19 ನವೆಂಬರ್ 2021, 8:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೇಶದಾದ್ಯಂತ ರೈತರ ಹೋರಾಟ, ಪ್ರತಿಭಟನೆಗಳನ್ನು ಎದುರಿಸಿರುವ ಕೇಂದ್ರ ಸರ್ಕಾರದ ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಬಗ್ಗೆ ರಾಜ್ಯದ ರೈತ ಮುಖಂಡರು ನೀಡಿರುವಪ್ರತಿಕ್ರಿಯೆಗಳು ಇಲ್ಲಿವೆ.

700 ರೈತರ ಸಾವಿಗೆ ಕೇಂದ್ರ ಸರ್ಕಾರ ಕಾರಣ
ಹೊಸಪೇಟೆ (ವಿಜಯನಗರ):
ನ.26ಕ್ಕೆ ರೈತರ‌ ಹೋರಾಟ ಒಂದು ವರ್ಷ ಅವಧಿ ಪೂರೈಸಲಿದೆ. ಈ ಅವಧಿಯಲ್ಲಿ 700ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್ ತಿಳಿಸಿದ್ದಾರೆ.

ಪ್ರತಿಭಟನಾ ನಿರತ ರೈತರನ್ನು ಖಾಲಿಸ್ತಾನಿಗಳು, ಭಯೋತ್ಪಾದಕರು ಎಂದು ಬಿಜೆಪಿಯವರು ಅಪಮಾನಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಬಿಜೆಪಿಯವರು ಬಹಿರಂಗವಾಗಿ ರೈತರ ಕ್ಷಮೆ ಯಾಚಿಸಬೇಕು. ಪ್ರಧಾನಿಯವರು ಈಗ ತೆಗೆದುಕೊಂಡಿರುವ ನಿರ್ಧಾರ ಈ ಹಿಂದೆಯೇ ತೆಗೆದುಕೊಂಡಿದ್ದರೆ ನೂರಾರು ರೈತರ ಜೀವಗಳು ಉಳಿಯುತ್ತಿದ್ದವು. ಕಾರ್ಪೊರೇಟ್‌ನವರ ಪರವಾಗಿ ಯೋಚಿಸುವುದು ಬಿಟ್ಟು, ಸಾಮಾನ್ಯ ಜನರ ಪರವಾಗಿ ಯೋಚಿಸಬೇಕು. ರಾಜ್ಯ ಸರ್ಕಾರ ಈಗಾಗಲೇ ಮೂರು ಕೃಷಿ ಕಾಯ್ದೆ ಜಾರಿಗೆ ತಂದಿದೆ. ಅವುಗಳನ್ನು ರದ್ದುಪಡಿಸಬೇಕು. ತೈಲ ದರ, ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ರೈತರ ಹೋರಾಟಕ್ಕೆ ಮಂಡಿಯೂರದ ಪ್ರಧಾನಿ
ಹಗರಿಬೊಮ್ಮನಹಳ್ಳಿ:
ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ರೈತರೆದುರು ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಯೂರಿದ್ದಾರೆ. ಕೊನೆಗೂ ಅವರಿಗೆ ರೈತರ ಶಕ್ತಿ ಏನೆಂಬುದು ಅರಿವಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಹೇಳಿದರು.

ನೂರಾರು ರೈತರ ಬಲಿದಾನಕ್ಕೆ‌ ಸಂದ ಜಯವಿದು. ಜಗತ್ತಿಗೆ‌ ಮತ್ತೊಮ್ಮೆ ರೈತರ ಶಕ್ತಿಯ ಅರಿವಾಗಿದೆ ಎಂದು ತಿಳಿಸಿದರು.

***

ಹೋರಾಟಕ್ಕೆ ದೊರೆತ ಪ್ರತಿಫಲ: ಚಾಮರಸ ಮಾಲಿಪಾಟೀಲ
ರಾಯಚೂರು:
ದೆಹಲಿಯಲ್ಲಿ ರೈತರು ನಡೆಸಿದ ಹೋರಾಟ ದೇಶವ್ಯಾಪಿ ವಿಸ್ತರಿಸಿಕೊಂಡಿದೆ. ಈ ಹೋರಾಟದ ಪ್ರತಿಫಲದಿಂದ ಕೇಂದ್ರ ಸರ್ಕಾರವು ಈಗ ಕೃಷಿ ಕಾಯ್ದೆ ಹಿಂಪಡೆದಿರುವುದು ಸ್ವಾಗತಾರ್ಹ ಎಂದು ಸ್ವರಾಜ್ ಇಂಡಿಯಾ ಪಾರ್ಟಿ ರಾಜ್ಯ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ ಹೇಳಿದರು.

ಪಂಜಾಬ್, ಉತ್ತರ ಪ್ರದೇಶ ಚುನಾವಣೆ ಬರುತ್ತಿದೆ. ಈ ಕಾರಣಕ್ಕಾಗಿ ಮಣಿದಿರುವ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸು ಪಡೆದಿದೆ. ಇದರಿಂದಾಗಿ ರೈತರು ಹಾಗೂ ಕೃಷಿ ಕ್ಷೇತ್ರ ಅಪಾಯದಿಂದ ಪಾರಾದಂತಾಗಿದೆ ಎಂದರು.

***

ಬಿಜೆಪಿ ನಡೆಯ ಬಗ್ಗೆಎಚ್ಚರ ವಹಿಸಬೇಕಿದೆ:ಪ್ರಕಾಶ್ ಕಮ್ಮರಡಿ
ಕರ್ನಾಟಕದಲ್ಲಿ ಈಗಾಗಲೇ ತಿದ್ದುಪಡಿ ಮಾಡಿರುವ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳು ಹಿಗ್ಗಾಮುಗ್ಗಾ ಅನುಷ್ಠಾನಗೊಂಡಿದೆ. ಶೇಕಡಾ 70 ರಿಂದ 80ರಷ್ಟು ವಿವಿಧ ಬೆಳೆಗಳಲ್ಲಿ ಎಪಿಎಂಸಿ ಒಳಗಿನ ವ್ಯವಹಾರ ಈಗಾಗಲೇ ಕಡಿಮೆಯಾಗಿದೆ.

ಹಾಗೆಯೇ ಶೇಕಡಾ 60 ಭೂಮಿಯ ವ್ಯವಹಾರ ಈ ಸಾರಿ ಅಧಿಕ ಗೊಂಡಿದೆ. ಕರ್ನಾಟಕದಲ್ಲಿ ಈ ಕಾಯ್ದೆಗಳು ವಾಪಾಸು ಬಂದಾಗ ಮಾತ್ರ ನಾವೆಲ್ಲ ಯಶಸ್ಸು ಅಂತ ಭಾವಿಸಬಹುದು.

ಅಷ್ಟರೊಳಗೆ ಬಿಜೆಪಿ ರೈತಪರ ಅಂತ ತನ್ನ ಮುಖವಾಡ ಬದಲಾಯಿಸಿ ಚುನಾವಣಾ ರಾಜಕೀಯದ ಲಾಭ ಪಡೆಯಲು ಎಲ್ಲ ಪ್ರಯತ್ನ ಮಾಡಲಿದೆ, ಅನುಮಾನವೇ ಇಲ್ಲ. ಹಾಗೇ ಶೀಘ್ರ ತೋರುಗಾಣಿಕೆಗೆ ಬೆಂಬಲ ಬೆಲೆಗೆ ಕಾನೂನನ್ನು ತರಬಹುದು. ಜೊತೆಗೆ ಪ್ರಭಾವಿ ಕೆಲ ಮುಖಂಡರುಗಳನ್ನು, ಸೆಳೆದುಕೊಳ್ಳಬಹುದು. ಎಲ್ಲವುದರಲ್ಲೂ ರೈತ ಸಂಘಟನೆಗಳು ಎಚ್ಚರವಹಿಸಬೇಕು.
ಡಾ.ಪ್ರಕಾಶ್ ಕಮ್ಮರಡಿ,ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

***

ಘೋಷಣೆ ಅಷ್ಟೇ ಸಾಲದು, ಕಾರ್ಯರೂಪಕ್ಕೆ ತರಲಿ
ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬರೀ ಘೋಷಣೆ ಮಾಡಿದರೆ ಸಾಲದು. ಅದನ್ನು ಸಂಪುಟ ಸಭೆಯಲ್ಲಿ ಇಟ್ಟು ತೀರ್ಮಾನಿಸಬೇಕು.

ಏಕೆಂದರೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಜನರ ವಿಶ್ವಾಸಕ್ಕೆ ಅರ್ಹರಲ್ಲದ ಪ್ರಧಾನಿ ಇವರು. ಪಂಚ ರಾಜ್ಯಗಳ ಚುನಾವಣೆಯಲ್ಲಿ ರೈತರ ವಿರೋಧ ಎದುರಿಸಬೇಕಾದೀತು ಎಂಬ ಹೆದರಿಕೆಯಿಂದ ಈ ನಿರ್ಧಾರ ಕೈಗೊಂಡಿದ್ದಾರೆಯೇ ಹೊರತು ರೈತರ ಮೇಲಿನ ಕಾಳಜಿಯಿಂದ ಅಲ್ಲ.

ಕೃಷಿಕರ ಬಗ್ಗೆ ಕಾಳಜಿ ಇದ್ದರೆ ಆಹಾರ ಭದ್ರತೆ ಕಾನೂನನ್ನು ಮೊದಲು ಆಹಾರ ಬೆಳೆಯುವವರ ಭದ್ರತೆಯ ಕಾನೂನು ಆಗಿ ಬದಲಾಯಿಸಲಿ.
–ನಾಗೇಶ ಸೋರಗಾವಿ, ಬಾಗಲಕೋಟೆ ಜಿಲ್ಲೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

***

‘ಸೋಲಿನ ಭಯದಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆದ ಪಿಎಂ’
ರೈತರಿಗೆ ಮಾರಕವಾಗಿದ್ದ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ದೇಶದ ವಿವಿಧ ಭಾಗಗಳಲ್ಲಿ ರೈತರು ನಿರಂತರ ಹೋರಾಟ ಕೈಗೊಂಡಿದ್ದರು. ಅದರ ಫಲವಾಗಿ ಸರ್ಕಾರ ಇಂದು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದಿರುವುದು ರೈತ ಸಮುದಾಯದಲ್ಲಿ ಹರ್ಷ ಮೂಡಿಸಿದೆ.

ಕೃಷಿ ಕಾಯ್ದೆ ವಿರೋಧಿಸಿ ಕೈಗೊಂಡಿದ್ದ ಸುದೀರ್ಘ ಹೋರಾಟದಲ್ಲಿ ಹಲವಾರು ರೈತರು ತಮ್ಮ ಜೀವವನ್ನು ಕಳೆದುಕೊಂಡು ಹುತಾತ್ಮರಾಗಿದ್ದರು. ರೈತರ ತ್ಯಾಗ, ಬಲಿದಾನಗಳು ವ್ಯರ್ಥವಾಗಲಿಲ್ಲ. ನಮ್ಮ ಹೋರಾಟ ಮತ್ತು ಶ್ರಮ ಇಂದು ಸಾರ್ಥಕವಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರು ತುಂಬಾ ಬುದ್ಧಿವಂತರಾಗಿದ್ದು, ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲು ಖಚಿತ ಎಂದು ಅರ್ಥ ಮಾಡಿಕೊಂಡಿದ್ದಾರೆ. ಚುನಾವಣೆಯ ಸೋಲಿನ ಭಯದಿಂದಾಗಿ ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಂಡಿದ್ದಾರೆ. ರೈತರ ಅಡ್ಡಿ ಆತಂಕಗಳು ಈಗ ದೂರವಾಗಿವೆ.
-ವೀರನಗೌಡ ಪಾಟೀಲ,ಪ್ರಧಾನ ಕಾರ್ಯದರ್ಶಿ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.