ADVERTISEMENT

ಬಂಡೀಪುರ ಅರಣ್ಯದಲ್ಲಿ ಮೋದಿ ಸಂಚಾರ; 22 ಕಿ.ಮೀ ಸಫಾರಿ ವೇಳೆ ಕಾಣದ ಹುಲಿರಾಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2023, 10:19 IST
Last Updated 9 ಏಪ್ರಿಲ್ 2023, 10:19 IST
ಸಫಾರಿಗೆ ಹೊರಟಾಗ ಮೋದಿ
ಸಫಾರಿಗೆ ಹೊರಟಾಗ ಮೋದಿ   

ಗುಂಡ್ಲುಪೇಟೆ: ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಆಚರಣೆಗಾಗಿ ಬಂಡೀಪುರಕ್ಕೆ ಬಂದಿರುವ ಪ್ರಧಾನಿ‌ ಮೋದಿ ಅವರು ಬಂಡೀಪುರ ಹುಲಿ‌ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿದರು.

ಬೆಳಿಗ್ಗೆ 7.35ರ ಸುಮಾರಿಗೆ ಬಂಡೀಪುರ ಕ್ಯಾಂಪಸ್‌ಗೆ ತಲುಪಿದ ಮೋದಿ ಅವರು ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

7.50ಕ್ಕೆ ತೆರೆದ ಜೀಪ್‌ನಲ್ಲಿ (ಬೊಲೆರೊ ಕ್ಯಾಂಪರ್) ಸಫಾರಿಗೆ ತೆರಳಿದ ಅವರು ಎರಡು ಗಂಟೆಗಳ‌ ಕಾಲ ಬಂಡೀಪುರ ಅರಣ್ಯದಲ್ಲಿ ಸಂಚರಿಸಿ, ಸೌಂದರ್ಯ ಸವಿದರು.

ADVERTISEMENT

ಪ್ರಧಾನಿ ಮೋದಿ ಅವರೊಂದಿಗೆ ದೆಹಲಿಯಿಂದ ಬಂದಿದ್ದ ಏಮ್ಸ್ ವೈದ್ಯರ ತಂಡ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ ಪಿ ಪದ್ಮನಿ ಸಾಹು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ‌ ಇಲಾಖೆಯ ವೈದ್ಯರ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ‌ಇದ್ದರು.

ಮೋದಿ ಅವರಿದ್ದ ವಾಹನದ ಜೊತೆಗೆ ಆಂಬುಲೆನ್ಸ್‌ ಸೇರಿದಂತೆ ಒಂಬತ್ತು ವಾಹನಗಳು ಸಾಗಿದವು ಎಂದು ಸಫಾರಿಗೆ ಹೋಗಿದ್ದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

22 ಕಿ.ಮೀ ಸಫಾರಿ: ಎರಡು ಗಂಟೆಗಳ ಅವಧಿಯಲ್ಲಿ ಮೋದಿ ಅವರು, ಅರಣ್ಯದ ಕಚ್ಚಾ ರಸ್ತೆಯಲ್ಲಿ 22 ಕಿ.ಮೀ ಸಂಚರಿಸಿ ಬಂಡೀಪುರದ ಅರಣ್ಯ, ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಿದರು.

ಕಾಣದ ಹುಲಿ: 'ಆನೆಗಳು, ಜಿಂಕೆಗಳು, ಕಾಟಿಗಳು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಸಫಾರಿ ಸಮಯದಲ್ಲಿ ಎದುರಾದವು. ನಮಗೆ ಹುಲಿ ಕಾಣಿಸಲಿಲ್ಲ' ಎಂದು ಅಧಿಕಾರಿ ಮಾಹಿತಿ‌ ನೀಡಿದರು.

ಅರಣ್ಯದ ಕಚ್ಚಾ ರಸ್ತೆಯಲ್ಲೇ ಸಾಗಿ 9.50ಕ್ಕೆ ಕೆಕ್ಕನಹಳ್ಳ ಚೆಕ್ ಪೋಸ್ಟ್‌ಗೆ ಮೋದಿ ತಲುಪಿದರು. ಅಲ್ಲಿಂದ ತಮ್ಮ ವಾಹನದಲ್ಲಿ ತಮಿಳುನಾಡಿನ ಮಧುಮಲೆ ಹುಲಿಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.