ತುಮಕೂರು: ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಎಚ್ಎಎಲ್ ಘಟಕದ ಬಳಿ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ವೇದಿಕೆ ಬಳಿ ಹೋಗಲು ಐದು ಗೇಟ್‌ಗಳನ್ನು ತೆರೆಯಲಾಗಿದೆ. 4 ಗೇಟ್‌ಗಳಲ್ಲಿ ಸಾರ್ವಜನಿಕರ ಪ್ರವೇಶ, ಮತ್ತೊಂದು ಗೇಟ್ ಮೂಲಕ ಗಣ್ಯರ ಆಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 70 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ವೀಕ್ಷಣೆಗೆ 60 ಎಲ್‌ಇಡಿ ಅಳವಡಿಸಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಒಟ್ಟು 15 ಜನ ಗಣ್ಯರು ವೇದಿಕೆಯಲ್ಲಿ ಇರಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ 300 ಬಾಣಸಿಗರಿಂದ ಅಡುಗೆ ತಯಾರಿ ನಡೆಯುತ್ತಿದೆ. ಮಾರಶೆಟ್ಟಿಹಳ್ಳಿ ಪಾರ್ಕಿಂಗ್ ಬಳಿ 64 ಕೌಂಟರ್ ಮತ್ತು ಸೋಪನಹಳ್ಳಿ ಪಾರ್ಕಿಂಗ್ ಹತ್ತಿರ 24 ಕೌಂಟರ್‌ಗಳ ಮೂಲಕ ಊಟ ವಿತರಿಸಲಾಗುತ್ತದೆ.
ಎಚ್‌ಎಎಲ್ ಘಟಕದ ಸುತ್ತಮುತ್ತ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 5 ಜನ ಪೊಲೀಸ್ ವರಿಷ್ಠಾಧಿಕಾರಿಗಳು, 19 ಡಿವೈಎಸ್‌ಪಿ, 55 ಇನ್‌ಸ್ಪೆಕ್ಟರ್, 119 ಸಬ್ ಇನ್‌ಸ್ಪೆಕ್ಟರ್, 239 ಜನ ಎಎಸ್‌ಐ, 1,202 ಕಾನ್‌ಸ್ಟೇಬಲ್‌ಗಳು, 400 ಮಂದಿ ಹೋಮ್‌ಗಾರ್ಡ್, 14 ಡಿಎಆರ್ ಮತ್ತು 12 ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಭದ್ರತೆಯ ದೃಷ್ಟಿಯಿಂದ ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೆ 206 ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ, ಸರಕು ಸಾಗಣೆ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ನಿರ್ಬಂಧಿಸಲಾಗಿದೆ. ನಿಟ್ಟೂರು ಕಡೆಯಿಂದ ಸಂಚರಿಸುವ ವಾಹನಗಳು ನಿಟ್ಟೂರು– ಟಿ.ಬಿ ಕ್ರಾಸ್– ತುರುವೇಕೆರೆ ಮಾರ್ಗವಾಗಿ ಕೆ.ಬಿ.ಕ್ರಾಸ್‍ಗೆ ತೆರಳುವುದು. ತಿಪಟೂರಿನಿಂದ ಬರುವ ವಾಹನಗಳು ಕೆ.ಬಿ.ಕ್ರಾಸ್– ತುರುವೇಕೆರೆ– ಟಿ.ಬಿ ಕ್ರಾಸ್ ಮಾರ್ಗವಾಗಿ ನಿಟ್ಟೂರಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.