ADVERTISEMENT

ಹೂಡಿಕೆ ಆಕರ್ಷಣೆಗೆ ಪ್ರಧಾನಿ ಮೋದಿ ಅಡ್ಡಗಾಲು: ಪ್ರಿಯಾಂಕ್‌ ಖರ್ಗೆ ಆರೋಪ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 10:11 IST
Last Updated 25 ಜೂನ್ 2024, 10:11 IST
<div class="paragraphs"><p>ಪ್ರಿಯಾಂಕ್‌ ಖರ್ಗೆ</p></div>

ಪ್ರಿಯಾಂಕ್‌ ಖರ್ಗೆ

   

ಬೆಂಗಳೂರು: ರಾಜ್ಯಕ್ಕೆ ವಿದೇಶಿ ಹೂಡಿಕೆ ಆಕರ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಉನ್ನತ ಮಟ್ಟದ ನಿಯೋಗವು ಹೂಡಿಕೆ ಆಕರ್ಷಣೆಗಾಗಿ ಅಮೆರಿಕ ಮತ್ತು ಬ್ರಿಟನ್‌ ಪ್ರವಾಸ ಕೈಗೊಂಡಿದ್ದ ಕುರಿತು ಮಾಹಿತಿ ನೀಡಲು ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಅವರು, ‘ನಾವು ಕರೆದುಕೊಂಡು ಬರುವ ಹೂಡಿಕೆದಾರರನ್ನು ಸಂಪರ್ಕಿಸಿ ಗುಜರಾತ್‌ ಮತ್ತು ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡುವಂತೆ ಒತ್ತಡ ಹೇರಿ, ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ನಾವು ವಿದೇಶ ಸುತ್ತಿ ಹೂಡಿಕೆದಾರರನ್ನು ಕರೆದುಕೊಂಡು ಬರುತ್ತೇವೆ. ಅಷ್ಟರೊಳಗೆ ಪ್ರಧಾನಿ ಮತ್ತು ಅವರ ಸಚಿವಾಲಯದ ಅಧಿಕಾರಿಗಳು ಹೂಡಿಕೆದಾರರನ್ನು ಸಂಪರ್ಕಿಸಿ ಗುಜರಾತ್ ಅಥವಾ ಉತ್ತರ ಪ್ರದೇಶಕ್ಕೆ ಹೋಗುವಂತೆ ಒತ್ತಡ ಹೇರುತ್ತಾರೆ. ತೆಲಂಗಾಣಕ್ಕೆ ಬಂದ ಹೂಡಿಕೆದಾರರಿಗೂ ಒತ್ತಡ ಹೇರಿರುವ ಉದಾಹರಣೆಗಳಿವೆ. ಮುಂದೆ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ’ ಎಂದರು.

ಸಮಾನ ಉತ್ತೇಜನಕ್ಕೆ ಆಗ್ರಹ:

ಗುಜರಾತ್‌ನಲ್ಲಿ ಹೂಡಿಕೆ ಮಾಡುವವರಿಗೆ ನೀಡುವಂತಹ ಉತ್ತೇಜನಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವವರಿಗೂ ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಮಾಡಿ ಒತ್ತಾಯ ಮಾಡಲಾಗುವುದು ಎಂದು ಪ್ರಿಯಾಂಕ್‌ ತಿಳಿಸಿದರು.

₹ 51,000 ಕೋಟಿ ಹೂಡಿಕೆ ನಿರೀಕ್ಷೆ:

ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ಮಾತನಾಡಿ, ಅಮೆರಿಕ ಮತ್ತು ಬ್ರಿಟನ್‌ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿ, ಹೂಡಿಕೆದಾರರನ್ನು ಭೇಟಿ ಮಾಡಲಾಗಿದೆ. ಈ ಭೇಟಿಯ ಪರಿಣಾಮವಾಗಿ ರಾಜ್ಯಕ್ಕೆ ₹ ₹ 51,000 ಕೋಟಿ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ. ಅಂತರರಾಷ್ಟ್ರೀಯ ಮಟ್ಟದ ಹಲವು ಸಂಶೋಧನಾ ಕೇಂದ್ರಗಳು ರಾಜ್ಯಕ್ಕೆ ಬರಲಿವೆ ಎಂದರು.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ್‌ ಕೌರ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.