ಬೆಂಗಳೂರು: ‘ಗುಲಾಮಗಿರಿಯ ಅಂಶಗಳು ನಮ್ಮ ರಕ್ತದಲ್ಲಿ ಉಳಿದುಕೊಂಡಿವೆ. ಅದನ್ನು ತೊಲಗಿಸಲು ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ’ ಎಂದು ಸಂಸದ ಡಿ.ವಿ. ಸದಾನಂದಗೌಡ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಬಿಜೆಪಿಯ 24 ಪ್ರಕೋಷ್ಠಗಳ ರಾಜ್ಯ ಸಂಚಾಲಕರು ಮತ್ತು ಸಹ ಸಂಚಾಲಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ದಾಸ್ಯದ ಗುರುತುಗಳು ಹಿಂದೂಗಳಿಗೆ ಸೀಮಿತವಾಗಿಲ್ಲ. ಎಲ್ಲರಲ್ಲೂ ಇವೆ. ಅವುಗಳನ್ನು ತೊಲಗಿಸಿ ಹೊಸ ಆಡಳಿತ ಸೂತ್ರ ನೀಡುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ. ದಾಸ್ಯದ ಗುರುತೇ ಇರಬಾರದು ಎಂಬುದು ಅವರ ಚಿಂತನೆ’ ಎಂದರು.
‘ಮೋದಿ ಈಗ ಜಾಗತಿಕ ಮಟ್ಟದ ನಾಯಕರಾಗಿದ್ದಾರೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ವಿ.ಪಿ.ಸಿಂಗ್ ಅವರಿಗಿಂತಲೂ ಹೆಚ್ಚಿನ ಜನಬೆಂಬಲ ಪಡೆದಿದ್ದಾರೆ. ದಿನದಿಂದ ದಿನಕ್ಕೆ ಅವರ ಶಕ್ತಿ ಹೆಚ್ಚುತ್ತಿದೆ. ನಡವಳಿಕೆ, ವ್ಯಕ್ತಿತ್ವ ಮತ್ತು ದೇಶಪ್ರೇಮ ಮೂರೂ ಮೇಳೈಸಿರುವ ಸೈದ್ಧಾಂತಿಕ ವ್ಯವಸ್ಥೆ ಇದಕ್ಕೆ ಕಾರಣ. ಮೋದಿಯವರ ಆಡಳಿತದಲ್ಲಿ ಭಾರತ ಯಶಸ್ವಿ ರಾಷ್ಟ್ರವಾಗಿ ಹೊರಹೊಮ್ಮಲಿದೆ’ ಎಂದು ಹೇಳಿದರು.
ಜಾತಿ ಆಧಾರಿತ ರಾಜಕಾರಣಕ್ಕಿಂತ ವೃತ್ತಿ ಆಧಾರಿತ ಸಂಘಟನೆಗಳ ಮೂಲಕ ಹೊಸ ಬಗೆಯ ರಾಜಕಾರಣ ಆರಂಭಿಸುವುದು ಬಿಜೆಪಿಯ ಉದ್ದೇಶ. ಈ ಕಾರಣದಿಂದಾಗಿ ಪ್ರಕೋಷ್ಠಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಜಾತಿಯನ್ನು ಮೀರಿ ವೃತ್ತಿ ಆಧಾರಿತ ರಾಜಕೀಯ ಚಟುವಟಿಕೆಗಳನ್ನು ಹೆಚ್ಚಿಸಲು ಪ್ರಕೋಷ್ಠಗಳ ಪ್ರಮುಖರು ಶ್ರಮಿಸಬೇಕು ಎಂದರು.
ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಂ.ಬಿ.ಭಾನುಪ್ರಕಾಶ್, ಸಹ ಸಂಯೋಜಕರಾದ ಡಾ.ಎ.ಹೆಚ್. ಶಿವಯೋಗಿಸ್ವಾಮಿ ಮತ್ತು ಜಯತೀರ್ಥ ಕಟ್ಟಿ, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.