ADVERTISEMENT

ಪಿ.ಎಂ. ಪೋಷಣ್: ಪೂರೈಕೆಯಾಗದ ಆಹಾರ ಧಾನ್ಯ

ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವುದೇ ಶಿಕ್ಷಕರಿಗೆ ಸವಾಲು!

ರಾಮಮೂರ್ತಿ ಪಿ.
Published 1 ಜುಲೈ 2024, 1:11 IST
Last Updated 1 ಜುಲೈ 2024, 1:11 IST
<div class="paragraphs"><p>ದಾವಣಗೆರೆಯ ನಿಟುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಊಟ ಸವಿಯುತ್ತಿರುವ ವಿದ್ಯಾರ್ಥಿಗಳು&nbsp; </p></div>

ದಾವಣಗೆರೆಯ ನಿಟುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಊಟ ಸವಿಯುತ್ತಿರುವ ವಿದ್ಯಾರ್ಥಿಗಳು 

   

–ಪ್ರಜಾವಾಣಿ ಚಿತ್ರ / ಸತೀಶ್ ಬಡಿಗೇರ್

ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಆರಂಭವಾಗಿ ತಿಂಗಳು ಕಳೆಯುತ್ತ ಬಂದರೂ ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ್ (ಮಧ್ಯಾಹ್ನದ ಉಪಾಹಾರ ಯೋಜನೆ) ಕಾರ್ಯಕ್ರಮದಡಿ ಆಹಾರ ಧಾನ್ಯ ಪೂರೈಕೆಯಾಗಿಲ್ಲ.

ADVERTISEMENT

ಇದರಿಂದಾಗಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಿತ್ಯ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸಿ ಬಡಿಸುವುದು ಶಿಕ್ಷಕರಿಗೆ ಸವಾಲಾಗಿ ಪರಿಣಮಿಸಿದೆ.

‌ರಾಜ್ಯದ ಬಹುತೇಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸರ್ಕಾರ ಪೂರೈಸುವ ಅಕ್ಕಿ, ಬೇಳೆ, ಗೋಧಿ, ಅಡುಗೆ ಎಣ್ಣೆ ಖಾಲಿಯಾಗಿದೆ. ಇದರಿಂದಾಗಿ ಬಿಸಿಯೂಟ ಯೋಜನೆ ಮುಂದುವರಿಸಲು ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಪರದಾಡುತ್ತಿದ್ದಾರೆ. ಖರ್ಚನ್ನು ತಾವೇ ಭರಿಸಿ ಆಹಾರ ಧಾನ್ಯವನ್ನು ಖರೀದಿಸಬೇಕಾದ ಅನಿವಾರ್ಯತೆಗೆ ಅವರು ಒಳಗಾಗಿದ್ದಾರೆ.

ಮಾರ್ಚ್‌ ಅಂತ್ಯದಲ್ಲಿ ಶಾಲೆಗಳಿಗೆ ಕೊನೆಯದಾಗಿ ಆಹಾರ ಧಾನ್ಯ ಪೂರೈಸಲಾಗಿದ್ದು, ಜೂನ್‌ ಮುಗಿಯುತ್ತ ಬಂದರೂ ಧಾನ್ಯ ತಲುಪಿಲ್ಲ.

‘ಮೇ 29ರಿಂದ ಶಾಲೆಗಳು ಶುರುವಾಗಿದ್ದು, ಸಂಗ್ರಹವಿದ್ದ ಧಾನ್ಯದಲ್ಲಿಯೇ ತಿಂಗಳ ಕಾಲ ಅಡುಗೆ ಮಾಡಿ ಬಡಿಸಲಾಗಿದೆ. ಈಗ ರೇಷನ್‌ ಖಾಲಿಯಾಗಿದೆ. ಅಡುಗೆ ಮಾಡಲು ಸಾಧ್ಯವೇ ಇಲ್ಲದ ಸ್ಥಿತಿ ಇದೆ. ಇನ್ನು 2–3 ದಿನಗಳಲ್ಲಿ ರೇಷನ್‌ ಬರದಿದ್ದರೆ, ಶಾಲೆಯಲ್ಲಿ ಅಡುಗೆ ಮಾಡುವುದನ್ನೇ ನಿಲ್ಲಿಸಬೇಕಾದ ಸ್ಥಿತಿ ಇದೆ’ ಎಂದು ಚನ್ನಗಿರಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

‘ಜಿಲ್ಲೆಯ ಅನೇಕ ಶಾಲೆಗಳಲ್ಲಿ ಧಾನ್ಯ ಖಾಲಿಯಾಗಿರುವ ಮಾಹಿತಿ ಇದೆ. ಯಾವುದೇ ಶಾಲೆಯಲ್ಲಿ ಬಿಸಿಯೂಟ ಯೋಜನೆಯನ್ನು ನಿಲ್ಲಿಸದಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಕೆಲವೆಡೆ ಅಕ್ಕಿ, ಅಡುಗೆ ಎಣ್ಣೆ, ಗೋಧಿಯ ಅಲ್ಪಸ್ವಲ್ಪ ದಾಸ್ತಾನು ಇದ್ದು, ಬೇಳೆ ಬರಬೇಕಿದೆ. ಜೂನ್‌ 27ರಂದು ಟೆಂಡರ್‌ ಆಗಿದ್ದು, ಬೇಳೆ ಪೂರೈಕೆಯಾದ ಕೂಡಲೇ ಎಲ್ಲ ಧಾನ್ಯವನ್ನು ಒಟ್ಟಿಗೇ ಶಾಲೆಗಳಿಗೆ ತಲುಪಿಸಲಾಗುವುದು’ ಎಂದು ಪಿಎಂ ಪೋಷಣ್‌ ಶಕ್ತಿ ನಿರ್ಮಾಣ್ ಯೋಜನೆಯ ಜಿಲ್ಲಾ ಶಿಕ್ಷಣ ಅಧಿಕಾರಿ ದುರುಗಪ್ಪ ಡಿ. ತಿಳಿಸಿದರು.

ಕಡ ನೀಡುವವರೂ ಇಲ್ಲ

ಶಾಲೆಗಳಲ್ಲಿ ಆಹಾರ ಧಾನ್ಯ ಖಾಲಿಯಾಗಿರುವ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ವರದಿ ನೀಡಿದ್ದಾರೆ. ‘ರೇಷನ್‌ ಶೀಘ್ರವೇ ಬರಲಿದ್ದು, ಅಲ್ಲಿಯವರೆಗೂ ನೆರೆಹೊರೆಯ ಸರ್ಕಾರಿ ಶಾಲೆಗಳಿಂದ ಆಹಾರ ಧಾನ್ಯ ಕಡ ತೆಗೆದುಕೊಳ್ಳಿ, ಇಲ್ಲವೇ ಸಮೀಪದ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯಿರಿ. ಶಾಲೆಗೆ ರೇಷನ್‌ ಬಂದಾಗ ಮರಳಿಸಿ’ ಎಂಬ ಮೌಖಿಕ ಸೂಚನೆಯನ್ನು ಹಿರಿಯ ಅಧಿಕಾರಿಗಳು ನೀಡಿದ್ದಾರೆ. 

‘ಬಹುತೇಕ ಶಾಲೆಗಳಲ್ಲಿ ರೇಷನ್‌ ಖಾಲಿಯಾಗಿದೆ. ಕೆಲವೇ ಕೆಲವು ಶಾಲೆಗಳಲ್ಲಿ ಮಾತ್ರ ಅಲ್ಪಸ್ವಲ್ಪ ಉಳಿದಿದ್ದು, ಇತರ ಶಾಲೆಯವರು ಕೇಳಿದರೆ ಕೊಡುವಷ್ಟು ಧಾನ್ಯ ಎಲ್ಲಿಯೂ ಇಲ್ಲ. ಹೀಗಾಗಿ ಆಹಾರ ಧಾನ್ಯವನ್ನು ಕಡ ನೀಡುವಂತೆ ಕೇಳಿದರೂ, ಯಾವ ಶಾಲೆಯಿಂದಲೂ ದೊರೆಯುತ್ತಿಲ್ಲ’ ಎಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯ ಶಿಕ್ಷಕರು ಸಂಕಷ್ಟ ತೋಡಿಕೊಂಡರು.

ದಾವಣಗೆರೆಯ ನಿಟುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಊಟ ಸವಿಯುವುದಕ್ಕೂ ಮುನ್ನ ಪ್ರಾರ್ಥನೆ ಸಲ್ಲಿಸಿದ ವಿದ್ಯಾರ್ಥಿಗಳು  –ಪ್ರಜಾವಾಣಿ ಚಿತ್ರ / ಸತೀಶ್ ಬಡಿಗೇರ್

‘ನ್ಯಾಯಬೆಲೆ ಅಂಗಡಿಗಳಲ್ಲಿ ಕೇವಲ ಅಕ್ಕಿ ದೊರೆಯುತ್ತದೆ. ಗೋಧಿ, ಅಡುಗೆ ಎಣ್ಣೆ, ಬೇಳೆ ಹಾಗೂ ಇನ್ನಿತರ ಧಾನ್ಯಗಳ ಖರೀದಿಗೆ ನಾವೇ ವೆಚ್ಚ ಭರಿಸಬೇಕಾಗಿದೆ. ಶಾಲೆಯ ಸಿ.ಜಿ. (ತರಕಾರಿ ವೆಚ್ಚ) ಮೊತ್ತದ ಉಳಿಕೆ ಹಣವನ್ನು ಬಿಡಿಸಿಕೊಳ್ಳಲೂ ಅನುಮತಿ ನೀಡಿಲ್ಲ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಿದೆ’ ಎಂದು ಅವರು ಹೇಳಿದರು.

ಆಹಾರ ಧಾನ್ಯ ಪೂರೈಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾರ್ಯಾದೇಶ ನೀಡಲಾಗಿದೆ. ಎಲ್ಲ ಜಿಲ್ಲೆಗಳಿಗೂ 2–3 ದಿನಗಳಲ್ಲಿ ಆಹಾರ ಧಾನ್ಯ ಸರಬರಾಜು ಆಗಲಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಿ.ಎಂ ಪೋಷಣ್‌ ಶಕ್ತಿ ನಿರ್ಮಾಣ್ ಯೋಜನೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಆಹಾರ ಧಾನ್ಯದ ಕೊರತೆ ಉಂಟಾಗಿದ್ದು ಅಚ್ಚರಿ ಮತ್ತು ಬೇಸರ ಉಂಟುಮಾಡಿದೆ. ಧಾನ್ಯ ಹೊಂದಿಸುವುದೇ ಶಿಕ್ಷಕರ ಕೆಲಸವಾಗಬಾರದು. ಸರ್ಕಾರ ಈ ಬಗ್ಗೆ ಕ್ರಮ ವಹಿಸಲಿ.
–ತೇಜಸ್ವಿ ವಿ. ಪಟೇಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಾವಣಗೆರೆ

‘ಬೇಸಿಗೆಯಲ್ಲಿ ಊಟ ನೀಡಿದ್ದರಿಂದ ಖಾಲಿ’

ಈ ಬಾರಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬೇಸಿಗೆಯ ರಜಾ ಅವಧಿಯಲ್ಲೂ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಏಪ್ರಿಲ್ 11ರಿಂದ ಮೇ 28ರವರೆಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಆಹಾರ ಧಾನ್ಯ ಒದಗಿಸಿರಲಿಲ್ಲ. ಮಾರ್ಚ್‌ ಅಂತ್ಯದಲ್ಲಿ ಶಾಲೆಗೆ ಬಂದಿದ್ದ ಆಹಾರ ಧಾನ್ಯವನ್ನೇ ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಅಂತೆಯೇ ಶಾಲೆಗಳಲ್ಲಿ ಈಗ ರೇಷನ್‌ ಖಾಲಿಯಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಜಿಲ್ಲೆಯಲ್ಲಿ ಇರುವ 1520 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1.44 ಲಕ್ಷ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲೂ ಊಟ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.