ADVERTISEMENT

ಯಡಿಯೂರಪ್ಪನವರನ್ನು ಕೆಣಕಲು ಹೋದರೆ ಕಾಂಗ್ರೆಸ್ ನಿರ್ನಾಮ: ಬಿಜೆಪಿ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2024, 2:50 IST
Last Updated 14 ಜೂನ್ 2024, 2:50 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ    

ಬೆಂಗಳೂರು: 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಲು ನ್ಯಾಯಾಲಯ ಆದೇಶ ನೀಡಿದೆ.

ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, 'ಪ್ರಕರಣ ದಾಖಲಾಗಿ 3 ತಿಂಗಳಾದ ಮೇಲೆ ದಿಢೀರ್​ ಬಂಧನ ಮಾಡುವ ಸಂಚು ರೂಪಿಸಿದ್ದು ಏಕೆ? ಇದು ಸರ್ಕಾರದ ನೀಚ ದ್ವೇಷ ರಾಜಕಾರಣ. ಕಾಂಗ್ರೆಸ್ಸಿನ ದೆಹಲಿ ನಾಯಕರ ನೀಚ ದ್ವೇಷ ರಾಜಕಾರಣಕ್ಕೆ ಕಟ್ಟುಬಿದ್ದು ಯಡಿಯೂರಪ್ಪನವರನ್ನು ಕೆಣಕಲು ಹೋದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮವಾಗುವುದರಲ್ಲಿ ಸಂಶಯವೇ ಇಲ್ಲ' ಎಂದು ಕಿಡಿಕಾರಿದೆ.

'ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ ಒಂದಿಲ್ಲೊಂದು ಷಡ್ಯಂತ್ರ ರೂಪಿಸುವಲ್ಲಿ ತಲ್ಲೀನರಾಗಿದ್ದಾರೆ. ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ್ದ ರಾಹುಲ್‌ ಗಾಂಧಿಯವರನ್ನು ಕೋರ್ಟ್ ಮೆಟ್ಟಿಲು ಹತ್ತಿಸಿದ್ದಕ್ಕಾಗಿ ದ್ವೇಷ ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಮಾನಸಿಕ ಅಸ್ವಸ್ಥೆ ನೀಡಿದ್ದ ದೂರನ್ನು ಆಧರಿಸಿ ರೈತ ನಾಯಕ ಬಿ.ಎಸ್‌ ಯಡಿಯೂರಪ್ಪ ಅವರನ್ನು ಬಂಧಿಸಲು ಹವಣಿಸುತ್ತಿದೆ' ಎಂದು ಕಿಡಿಕಾರಿದೆ.

ADVERTISEMENT

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ತಲೆದಂಡ ಹಾಗೂ ಸ್ವತಃ ಸರ್ಕಾರದ ಮೇಲೆ ಆರೋಪ ಬಂದಿರುವ ಬೆನ್ನಲ್ಲೇ ಭ್ರಷ್ಟಾಚಾರ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಯಡಿಯೂರಪ್ಪನವರ ಮೇಲೆ ಅಪಪ್ರಚಾರದ ಷಡ್ಯಂತರ ರೂಪಿಸಿದ್ದಾರೆ.

ಈ ಹಿಂದೆ ಸ್ವತಃ ಗೃಹ ಸಚಿವ ಜಿ. ಪರಮೇಶ್ವರ ಅವರೇ ಮಾನಸಿಕ ಅಸ್ವಸ್ಥೆ ದುರುದ್ದೇಶಪೂರಿತವಾಗಿ ದೂರು ನೀಡಿದ್ದಾಳೆಂದು ಹೇಳಿಕೆ ನೀಡಿ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಜಗಜ್ಜಾಹೀರಾಗಿತ್ತು. 3 ತಿಂಗಳ ನಂತರ ಈ ಪ್ರಕರಣಕ್ಕೆ ಮರುಜೀವ ತುಂಬಲು ಹೊರಟಿರುವುದು ವಿಪರ್ಯಾಸ.

ಮಾನಸಿಕ ಅಸ್ವಸ್ಥೆ ಸ್ವತಃ ತನ್ನ ಮಕ್ಕಳು ಹಾಗೂ ಗಂಡನ ವಿರುದ್ಧವೇ ದೂರು ನೀಡಿರುವುದೂ ಸೇರಿದಂತೆ 53 ಜನರ ವಿರುದ್ಧದ ದೂರುಗಳಲ್ಲಿ ಯಡಿಯೂರಪ್ಪನವರ ಪ್ರಕರಣಕ್ಕೇ ಸರ್ಕಾರ ವಿಶೇಷ ಒತ್ತು ನೀಡಿದ್ದು ಏಕೆ? ಪ್ರಕರಣ ದಾಖಲಾಗಿ 3 ತಿಂಗಳಾದ ಮೇಲೆ ದಿಢೀರ್ ಬಂಧನ ಮಾಡುವ ಸಂಚು ರೂಪಿಸಿದ್ದು ಏಕೆ? ಎಂದು ಬಿಜೆಪಿ ಪ್ರಶ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.