ಬೆಂಗಳೂರು: ‘ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವು ಮಾಡಿಸಲು ಅಡ್ವೊಕೇಟ್ ಜನರಲ್‌ಗೆ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಈ ಎಲ್ಲ ಪ್ರಕರಣಗಳ ತನಿಖೆಗೆ ಆದೇಶ ಮಾಡಿದ್ದೇವೆ. ದೇವರಾಜು ಅರಸು ಟ್ರಕ್ ಟರ್ಮಿನಲ್‌ನಲ್ಲಿ ₹ 47 ಕೋಟಿ ಚೆಕ್ ಮೂಲಕ ಪಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ತನಿಖಾ ವರದಿ ಆಧರಿಸಿ ಮುಂದಿನ ಕ್ರಮದ ತೆಗೆದುಕೊಳ್ಳುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸುತ್ತೇವೆ’ ಎಂದರು.
‘ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ, ಕಾನೂನು ಹೋರಾಟ ನಡೆಸುತ್ತೇವೆ. ಕಾನೂನು ಹೋರಾಟ ಆರಂಭವಾದ ಬಳಿಕ ಮುಂದಿನ ಬೆಳವಣಿಗೆ ಏನೆಂಬುದನ್ನು ಗಮನಿಸಿ ರಾಷ್ಟ್ರಪತಿಯನ್ನು ಭೇಟಿ ಮಾಡುವ ಬಗ್ಗೆ ನಿರ್ಧರಿಸುತ್ತೇವೆ’ ಎಂದರು.
‘ಹಲವು ಪ್ರಕರಣಗಳು ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಉಳಿದಿವೆ. ಯಾವುದಕ್ಕೂ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಮುಂದಾಗಿಲ್ಲ. ಮುಡಾ ವಿಚಾರದಲ್ಲಿ ತುರಾತುರಿಯಲ್ಲಿ ನೋಟಿಸ್ ನೀಡಿದ್ದಾರೆ. ಜುಲೈ 26ರಂದು ರಾಜ್ಯಪಾಲರಿಗೆ ಟಿ.ಜೆ. ಅಬ್ರಹಾಂ ಮನವಿ ಕೊಡುತ್ತಾರೆ. ಅದೇ ದಿನ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತಾರೆ. ಮುಖ್ಯ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ. ಅದೇ ದಿನ ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರ ಹಿಂದಿನ ಉದ್ದೇಶ ಏನೆಂಬುದನ್ನು ರಾಜ್ಯಪಾಲರು ಹೇಳಬೇಕಲ್ಲವೇ’ ಎಂದು ಮರು ಪ್ರಶ್ನಿಸಿದರು.
‘ರಾಜ್ಯಪಾಲರು ಸಂವಿಧಾನದ ಮುಖ್ಯಸ್ಥರು. ಅನೇಕ ಪ್ರಕರಣಗಳು ಅವರ ಕಚೇರಿಯಲ್ಲಿ ಬಾಕಿ ಉಳಿದು, ಯಾವುದಕ್ಕೂ ಗಮನಹರಿಸದೇ ಏಕಾಏಕಿ ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರ ಹಿಂದೆ ಷಡ್ಯಂತ್ರ ಇದೆ. ರಾಜ್ಯಪಾಲರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡುತ್ತೇವೆ’ ಎಂದರು.
‘ಕೆಲವು ದಿನಗಳಲ್ಲಿ ಸರ್ಕಾರದಲ್ಲಿ ಯಾರು ಎಲ್ಲೆಲ್ಲಿರಬೇಕು, ಏನೇನಾಗುತ್ತದೆ’ ಎಂದು ಕಾದು ನೋಡಿ ಎಂದು ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಲಿ. ನಮ್ಮದೇನು ತಕಾರಾರು ಇಲ್ಲ. ಅದಕ್ಕೂ ಮೊದಲು ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.