ADVERTISEMENT

ಶಿವಮೂರ್ತಿ ಶರಣರ ಪ್ರಕರಣ: ಬಸವರಾಜನ್ ದಂಪತಿ ವಿರುದ್ಧದ ದೂರು ರದ್ದು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 15:50 IST
Last Updated 3 ನವೆಂಬರ್ 2023, 15:50 IST
ಹೈಕೋರ್ಟ್‌
ಹೈಕೋರ್ಟ್‌    

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣಕ್ಕೆ ಪ್ರತಿಯಾಗಿ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್‌ ಮತ್ತು ಅವರ ಪತ್ನಿ ಸೌಭಾಗ್ಯ ಬಸವರಾಜನ್‌ ವಿರುದ್ಧ ಪಿತೂರಿ ಹಾಗೂ ಸಂಚು ಹೆಣೆದ ಆರೋಪದಡಿ ದಾಖಲಾಗಿದ್ದ ದೂರನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

‘ನಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ವಿಚಾರಣಾ ನ್ಯಾಯಾಲಯದ ಮುಂದಿನ ಪ್ರಕ್ರಿಯೆಗಳನ್ನು ರದ್ದುಪಡಿಸಬೇಕು‘ ಎಂದು ಕೋರಿ ಬಸವರಾಜನ್‌ ಮತ್ತು ಸೌಭಾಗ್ಯ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

’ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸಲ್ಲಿಸಿರುವ ಈ ದೂರಿನಲ್ಲಿ ಯಾವುದೇ ಹುರುಳಿಲ್ಲ. ಶರಣರ ವಿರುದ್ಧ ಹೊರಿಸಲಾಗಿರುವ ಬಾಲಕಿಯರ ಮೇಲಿನ ಅತ್ಯಾಚಾರದ ಆಪಾದನೆಗಳಿಗೆ ರಕ್ಷಣೆ ಪಡೆಯಲು ಇಂತಹ ಪ್ರತಿ ದೂರು ದಾಖಲಿಸಲಾಗಿದೆ‘ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಹಷ್ಮತ್‌ ಪಾಷ ಮಂಡಿಸಿದ್ದ ವಾದವನ್ನು ನ್ಯಾಯಪೀಠ ಮಾನ್ಯ ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ADVERTISEMENT

ಪ್ರಕರಣವೇನು?: ಪೋಕ್ಸೊ ಪ್ರಕರಣದಲ್ಲಿ ಶರಣರ ಬಂಧನವಾದ ನಂತರ, ‘ಸುಳ್ಳು ಕೇಸು ದಾಖಲಿಸಲು ಸಂತ್ರಸ್ತ ಬಾಲಕಿಗೆ ಅಥಣಿ ತಾಲ್ಲೂಕಿನ ಜುಂಜರವಾಡ ಗ್ರಾಮದ ನಿವಾಸಿಯಾದ ಮಠದ ಶಾಲಾ ಶಿಕ್ಷಕ ಬಸವರಾಜೇಂದ್ರ ಮತ್ತು ಗಾಯತ್ರಿ ಪ್ರಚೋದನೆ ನೀಡಿದ್ದಾರೆ‘ ಎಂಬ ಆರೋಪದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಸಂಬಂಧ ಬಸವರಾಜೇಂದ್ರ ಅವರನ್ನು ಪೊಲೀಸರು ನವೆಂಬರ್ 10ರಂದು ಬಂಧಿಸಿದ್ದರು. 

ಇದೇ ಪ್ರಕರಣದಲ್ಲಿ ಶರಣರ ವಿರುದ್ಧ ಪಿತೂರಿ ನಡೆಸಿ ಸಂಚು ಹೆಣೆದ ಆರೋಪದಡಿ ಮಾಜಿ ಶಾಸಕರೂ ಆದ ಬಸವರಾಜನ್ ಮತ್ತು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆಯೂ ಆದ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನೂ ಪೊಲೀಸರು ಬಂಧಿಸಿದ್ದರು. ನಂತರ ಇಬ್ಬರೂ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.