ADVERTISEMENT

59 ಸಾವಿರ ದರ್ಖಾಸ್ತ್‌ ಭೂಮಿಗೆ ಪೋಡಿ ಭಾಗ್ಯ: ಕೃಷ್ಣ ಬೈರೇಗೌಡ

ಹಾಸನ ಜಿಲ್ಲೆಯಿಂದ ಆರಂಭ: ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 20:52 IST
Last Updated 27 ಸೆಪ್ಟೆಂಬರ್ 2024, 20:52 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ರಾಜ್ಯದ ದರ್ಖಾಸ್ತ್‌ ಜಮೀನುಗಳ (ಸರ್ಕಾರಿ ಭೂಮಿ ಸಾಗುವಳಿ) 59 ಸಾವಿರ ಸರ್ವೆ ನಂಬರ್‌ಗಳ ಪೋಡಿಗಾಗಿ ‘ಅರ್ಹತಾ ಕಡತ’ ಸಿದ್ಧಪಡಿಸುವ ಕಾರ್ಯಕ್ಕೆ ಅ.2ರಂದು ಹಾಸನ ಜಿಲ್ಲೆಯಲ್ಲಿ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮೊದಲ ಹಂತದಲ್ಲಿ ಗ್ರಾಮ ಆಡಳಿತ ಅಧಿಕಾರಿ, ತಹಶೀಲ್ದಾರ್‌ ಮೊದಲಾದ ಕಂದಾಯ ಅಧಿಕಾರಿಗಳು 1ರಿಂದ 5ರವರೆಗಿನ ‘ಅರ್ಹತಾ ಕಡತ’ ಸಿದ್ಧಪಡಿಸಿಕೊಡುವರು. ನಂತರ ಸರ್ವೆ ಕಾರ್ಯ ನಡೆದು, ಪೋಡಿ ಮಾಡಲಾಗುವುದು. ಇದರಿಂದ ದಶಕಗಳ ಹಿಂದೆ ಮಂಜೂರಾದ ಭೂಮಿ ಉಳುಮೆ ಮಾಡುತ್ತಿರುವ ಸುಮಾರು 5 ಲಕ್ಷ ರೈತರ  ಸಂಕಷ್ಟ ನಿವಾರಣೆಯಾಗಲಿದೆ ಎಂದರು.

ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸರ್ವೆ ಇಲಾಖೆ ಉಪ ನಿರ್ದೇಶಕರಿಗೆ ಹೊಣೆಗಾರಿಕೆ ನೀಡಲಾಗುವುದು. ಬಹುಮಾಲೀಕತ್ವ ಹೊಂದಿರುವ 22 ಲಕ್ಷ ಸರ್ವೆ ನಂಬರ್‌ಗಳಲ್ಲೂ ಪೋಡಿ ಕಾರ್ಯ ಆರಂಭಿಸಲಾಗುವುದು. ಇದರಿಂದ ಸುಮಾರು 80 ಲಕ್ಷ ಭೂ ಮಾಲೀಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ADVERTISEMENT

ಕೋರ್ಟ್‌ ಪ್ರಕರಣಗಳಿಗೂ ಕಾಲಮಿತಿ:

ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಕೋರ್ಟ್‌ಗಳಲ್ಲಿನ ಪ್ರಕರಣಗಳನ್ನು ಕಾಲಮಿತಿಯ ಒಳಗೆ ಇತ್ಯರ್ಥಪಡಿಸಲು ಗಡುವು ನಿಗದಿ ಮಾಡಲಾಗಿದೆ. ಪ್ರಕರಣ ದಾಖಲಾದ 97 ದಿನಗಳ ಒಳಗೆ ತಹಶೀಲ್ದಾರ್‌ ಹಾಗೂ ಆರು ತಿಂಗಳ ಒಳಗೆ ಉಪ ವಿಭಾಗಾಧಿಕಾರಿಗಳು ಅಂತಿಮ ತೀರ್ಪು ನೀಡಬೇಕಿದೆ ಎಂದರು.

160 ಬಗರ್‌ಹುಕುಂ ಸಮಿತಿ; 8 ತಿಂಗಳ ಗಡುವು ಅರ್ಜಿ ನಮೂನೆ 57ರ ಅಡಿ ಸಲ್ಲಿಕೆಯಾದ 9.80 ಲಕ್ಷ ಅರ್ಜಿಗಳನ್ನು ಇತ್ಯರ್ಥಪಡಿಸಲು 160 ಬಗರ್‌ಹುಕುಂ ಸಮಿತಿಗಳನ್ನು ರಚಿಸಲಾಗಿದೆ. ಎಂಟು ತಿಂಗಳ ಒಳಗೆ ಎಲ್ಲ ಅರ್ಜಿಗಳನ್ನೂ ಪರಿಶೀಲಿಸಿ ಅರ್ಹ ಸಾಗುವಳಿದಾರರಿಗೆ ಭೂ ಮಂಜೂರಾತಿ ನೀಡಲು ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು. ನಮೂನೆ 53ರ ಅಡಿ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಇತ್ಯರ್ಥವಾಗದೆ ಉಳಿದ ಅರ್ಜಿಗಳನ್ನೂ ಪರಿಗಣಿಸಲು ಸಮಿತಿಗಳಿಗೆ ಸೂಚಿಸಲಾಗಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.