ಬೆಂಗಳೂರು: ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಇಡೀ ಕಚೇರಿಯನ್ನೇ ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ.
ಪೊಲೀಸರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಷಾಗುತ್ತಿದೆ. ಶುಕ್ರವಾರವೂ ಆರು ಪೊಲೀಸರಲ್ಲಿ ಸೋಂಕು ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಅವರೆಲ್ಲರೂ ನಿಗದಿತ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಅದರಲ್ಲಿ ಒಬ್ಬರು, ಇನ್ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರು. ಇತ್ತೀಚೆಗೆ ಕಚೇರಿ ಸಿಬ್ಬಂದಿಯನ್ನು ಸಾಮೂಹಿಕವಾಗಿ ಗಂಟಲಿನ ದ್ರವದ ಪರೀಕ್ಷೆ ಮಾಡಿಸಲಾಗಿತ್ತು. ಅದರ ವರದಿ ಶುಕ್ರವಾರ ಬಂದಿದೆ.
ಬಿಬಿಎಂಪಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕಮಿಷನರ್ ಕಚೇರಿಯನ್ನು ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಿದ್ದಾರೆ. ಸಿಬ್ಬಂದಿ ಜೊತೆ ಸಂಪರ್ಕದಲ್ಲಿದ್ದ ಸಹೋದ್ಯೋಗಿಗಳನ್ನು ಕ್ವಾರಂಟೈನ್ ಮಾಡಿದ್ದಾರೆ.
‘ಸಿಬ್ಬಂದಿಗೆ ಕೊರೊನಾ ಬಂದಿರುವುದರಿಂದ ಜೂನ್ 29ರವರೆಗೂ ಕಮಿಷನರ್ ಕಚೇರಿ ಸೀಲ್‌ಡೌನ್ ಮಾಡಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮನೆಯಿಂದಲೇ ಕೆಲಸ ಮಾಡಿ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಆಡಳಿತ) ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.
ಸಿಟಿ ಮಾರ್ಕೆಟ್ ಸಿಬ್ಬಂದಿಗೂ ಕೊರೊನಾ; ಸಿ.ಟಿ.ಮಾರ್ಕೆಟ್ ಪೊಲೀಸ್ ಠಾಣೆಯ ನಾಲ್ವರು ಪೊಲೀಸರಿಗೂ ಕೊರೊನಾ ಸೋಂಕು ತಗುಲಿದೆ. ಚಾಮರಾಜಪೇಟೆ ಠಾಣೆ ಸಿಬ್ಬಂದಿಯೊಬ್ಬರಲ್ಲೂ ಕೊರೊನಾ ಸೋಂಕು ಕಂಡುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.