ಬೆಂಗಳೂರು: ಭೂಗಳ್ಳರು, ಮರಳು ಕಳ್ಳಸಾಗಣೆದಾರರು ಸೇರಿದಂತೆ ಯಾವುದೇ ಮಾಫಿಯಾಗಳ ಜತೆ ಪೊಲೀಸರು ನಂಟು ಇರಿಸಿಕೊಳ್ಳದಂತೆ ತಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಸೋಮವಾರ ನಡೆದ ಐಪಿಎಸ್ ಅಧಿಕಾರಿಗಳ ಸಮ್ಮೇಳನ ಉದ್ಘಾಟಿಸಿ, ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಮತ್ತು ಅವರ ಏಜೆಂಟರ ಜತೆ ಪೊಲೀಸರ ನಂಟು ಇರಕೂಡದು ಎಂದು ತಾಕೀತು ಮಾಡಿದ್ದೇನೆ’ ಎಂದರು.
ಬೆಂಗಳೂರು ನಗರ ಮತ್ತು ಸುತ್ತಮುತ್ತ ಭೂಗಳ್ಳರ ಮಾಫಿಯಾ ಜೋರಾಗಿ ಕೆಲಸ ಮಾಡುತ್ತಿದೆ. ಭೂಕಬಳಿಕೆ ಮಾಡುವವರ ಜತೆ ಕೈ ಜೋಡಿಸದಂತೆ ಪೊಲೀಸರಿಗೆ ಸೂಚಿಸಲಾಗಿದೆ. ರಾಜ್ಯದ ವಿವಿಧೆಡೆ ಮರಳು ಕಳ್ಳಸಾಗಣೆಯೂ ನಡೆಯುತ್ತಿರುವ ಆರೋಪವಿದೆ. ಮರಳು ಕಳ್ಳಸಾಗಣೆ ಮಾಡುವವರಿಗೆ ಪೊಲೀಸರು ಸಹಕಾರ ನೀಡಬಾರದು ಎಂಬ ನಿರ್ದೇಶನವನ್ನೂ ನೀಡಲಾಗಿದೆ ಎಂದು ಹೇಳಿದರು.
ಅಪರಾಧ ಪ್ರಕರಣಗಳ ತನಿಖೆಯಲ್ಲಿ ಯಾವುದೇ ರೀತಿಯಲ್ಲೂ ರಾಜಿ ಆಗಬಾರದು. ಸೈಬರ್ ಅಪರಾಧ, ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ನಿಷ್ಪಕ್ಷಪಾತ ಮತ್ತು ನಿಷ್ಠುರವಾದ ತನಿಖೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದರು.
ಪ್ರತ್ಯೇಕ ಡ್ಯಾಶ್ ಬೋರ್ಡ್: ಇಲಾಖೆಯ ಎಲ್ಲ ಹಂತಗಳಲ್ಲೂ ವರದಿ ಮಾಡುವ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ. ನಿತ್ಯ ದಾಖಲಾಗುವ ಪ್ರಕರಣಗಳ ಕುರಿತು ಕಿರಿಯ ಅಧಿಕಾರಿಗಳಿಂದ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದು ಮತ್ತು ಹಿರಿಯ ಅಧಿಕಾರಿಗಳಿಂದ ಸೂಚನೆ, ಆದೇಶ ನೀಡುವ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
‘ಪೊಲೀಸ್ ಮಹಾನಿರ್ದೇಶಕರು, ಎಲ್ಲ ನಗರ ಪೊಲೀಸ್ ಕಮಿಷನರ್‌ಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತ್ಯೇಕವಾದ ಡ್ಯಾಶ್ ಬೋರ್ಡ್ ಹೊಂದಬೇಕು. ಅಪರಾಧ ಪ್ರಕರಣಗಳ ಪಟ್ಟಿ, ಬಂಧನ ಮತ್ತಿತರ ಮಾಹಿತಿಯನ್ನು ನೇರವಾಗಿ ಡ್ಯಾಶ್ ಬೋರ್ಡ್‌ನಿಂದಲೇ ಪಡೆದುಕೊಂಡು ಪರಿಶೀಲಿಸಲು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.
ಜನಸ್ನೇಹಿ ವರ್ತನೆ: ಪೊಲೀಸರು ಜನಸ್ನೇಹಿಯಾಗಿ ವರ್ತಿಸಬೇಕು. ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಕಿರಿಯ ಸಿಬ್ಬಂದಿ ಜೊತೆ ಸೌಜನ್ಯದಿಂದ ವರ್ತಿಸಬೇಕು. ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸುವುದಕ್ಕೆ ಪೂರಕವಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ವರ್ತನೆಯಲ್ಲಿ ಬದಲಾವಣೆ ತರುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ರಾಜ್ಯ ಪೊಲೀಸ್ ಇಲಾಖೆ ಕುರಿತ ಕಾಫಿ ಟೇಬಲ್ ಪುಸ್ತಕ ಮತ್ತು ಸೇವೆಯಲ್ಲಿದ್ದಾಗ ಮೃತರಾದ ಪೊಲೀಸ್ ಸಿಬ್ಬಂದಿಗೆ ನೀಡಿರುವ ಪರಿಹಾರದ ವಿವರಗಳುಳ್ಳ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಮುಖ ಚಹರೆಯನ್ನು ಗುರುತಿಸುವ ‘ಫೇಸ್ ರೆಕಗ್ನಿಷನ್’ ವ್ಯವಸ್ಥೆಗೆ ಮುಖ್ಯಮಂತ್ರಿ ಚಾಲನೆ ನೀಡಿದರು.
ಪ್ರತ್ಯೇಕ ತಾಂತ್ರಿಕ ವಿಭಾಗ
ಆರ್ಥಿಕ ಮತ್ತು ಸೈಬರ್ ಅಪರಾಧ ನಿಯಂತ್ರಣಕ್ಕೆ ಪ್ರತ್ಯೇಕ ತಾಂತ್ರಿಕ ವಿಭಾಗ ರಚಿಸುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಆಂತರಿಕ ಭದ್ರತಾ ವಿಭಾಗದ ಬಲವರ್ಧನೆ, ಕರಾವಳಿ ಕಾವಲು ಪಡೆಗೆ ಹೈಸ್ಪೀಡ್ ದೋಣಿಗಳ ಖರೀದಿ, ಕಿರಿಯ ಅಧಿಕಾರಿಗಳಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆರು ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭಿಸಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.