ADVERTISEMENT

ಪೊಲೀಸ್‌ ಕಿರುಕುಳ: ಹೈಕೋರ್ಟ್‌ನಲ್ಲಿ ಎಂಜಿನಿಯರ್ ಅಳಲು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 15:38 IST
Last Updated 6 ಆಗಸ್ಟ್ 2024, 15:38 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ನನಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಡಿವೈಎಸ್‌ಪಿ (ಉಪ ಪೊಲೀಸ್ ವರಿಷ್ಠಾಧಿಕಾರಿ) ಕಿರುಕುಳ ನೀಡುತ್ತಿದ್ದಾರೆ. ನಾನು ಕೋರ್ಟ್‌ ಹಾಲ್‌ನಿಂದ ಹೊರಗೆ ಹೋಗುವುದಿಲ್ಲ. ನನ್ನನ್ನು ಕಾಪಾಡಿ’ ಎಂದು ಸಾಗರದ ಕೆಪಿಟಿಸಿಎಲ್‌ನ ಸಹಾಯಕ ಎಂಜಿನಿಯರ್; ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ಕೈಮುಗಿದು ಅಂಗಲಾಚಿದ ಘಟನೆಗೆ ಹೈಕೋರ್ಟ್‌ ಮಂಗಳವಾರ ಸಾಕ್ಷಿಯಾಯಿತು.

ಬೆಳಗಿನ ಕಲಾಪ ಮುಗಿಸಿ ಮಧ್ಯಾಹ್ನದ ಊಟದ ವೇಳೆಗೆ ಪೀಠದಿಂದ ನಿರ್ಗಮಿಸಲು ಸಿದ್ಧರಾದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಮುಂದೆ ಕೈಮುಗಿದು ಹಾಜರಾದ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಜಿ.ಶಾಂತಕುಮಾರ ಸ್ವಾಮಿ, ‘ಡಿವೈಎಸ್‌ಪಿ ಗೋಪಾಲ ನಾಯಕ್‌ ನನ್ನ ಮೇಲೆ ಎಸಗಿರುವ ದೌರ್ಜನ್ಯ ಎಸಗಿದ್ದಾರೆ’ ಎಂದು ವಿವರಿಸಿ ರಕ್ಷಣೆ ಒದಗಿಸುವಂತೆ ಕೋರಿದರು.

ADVERTISEMENT

ಶಾಂತಕುಮಾರ ಸ್ವಾಮಿ ಹೇಳಿದ್ದೇನು?: ‘ನನಗೆ ಮದುವೆ ನಿಶ್ಚಯಗೊಂಡು ರದ್ದಾಗಿತ್ತು. ತದನಂತರ ಸ್ಥಳೀಯ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಪೊಲೀಸರು ನನ್ನ ಮೇಲೆ ಸುಳ್ಳು ಪ್ರಕರಣವೊಂದನ್ನು ದಾಖಲಿಸಿ, ನನ್ನಿಂದ ಹಣ ಕೀಳಲು ಪ್ರಯತ್ನಿಸಿದ್ದಾರಲ್ಲದೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ರೆಕಾರ್ಡ್ ಮಾಡಿ, ನಾನು ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಇದರಿಂದ ಕುಪಿತಗೊಂಡ ಅವರು, ಲೋಕಾಯುಕ್ತಕ್ಕೆ ದೂರು ನೀಡಿದ್ದೀಯಾ ಎಂದು ನನ್ನನ್ನು ಸಾಗರದಲ್ಲಿ ಇರಗೊಡಲು ಬಿಡುತ್ತಿಲ್ಲ. ಅಲ್ಲಿಂದ ವರ್ಗಾವಣೆಗೆ ಕೋರುತ್ತಿದ್ದರೆ ಅದೂ ಸಾಧ್ಯವಾಗಿಲ್ಲ’ ಎಂದು ಎಂ.ಜಿ.ಶಾಂತಕುಮಾರ ಸ್ವಾಮಿ ತಮಗಾಗುತ್ತಿರುವ ನೋವನ್ನು ತೋಡಿಕೊಂಡರು.

‘ಸಾಗರದಲ್ಲಿ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಜುಲೈ 22ರಂದು ತಮ್ಮ ಘನ ನ್ಯಾಯಪೀಠದ ಮುಂದೆಯೇ ನಡೆದಿತ್ತು. ನಾನು ಅಂದು ವಕೀಲರನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದ್ದರಿಂದ, ಹೊಸದಾಗಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಿ ತಾವು ಅರ್ಜಿ ವಿಲೇವಾರಿ ಮಾಡಿದ್ದೀರಿ. ಈ ಪ್ರಕ್ರಿಯೆಯನ್ನು ವಿಡಿಯೊದಲ್ಲಿ ವೀಕ್ಷಿಸಿದ್ದ ಡಿವೈಎಸ್‌ಪಿ, ಹೈಕೋರ್ಟ್‌ನಲ್ಲಿ ಪೊಲೀಸರ ವಿರುದ್ಧ ದೂರು ಹೇಳುತ್ತೀಯ? ಎಂದು ನನ್ನನ್ನು ದಂಡಿಸಿದ್ದಾರೆ’ ಎಂದು ದೂರಿದರು.

‘ನನ್ನ ವಿರುದ್ಧ ಸುಳ್ಳು ಗಾಂಜಾ ಪ್ರಕರಣ ಸೇರಿದಂತೆ ಕೆಲವು ಗಂಭೀರ ಅಪರಾಧಿಕ ಕೃತ್ಯಗಳ ಕಲಂ ಅನ್ನೂ ಅನ್ವಯಿಸಿ ನನ್ನನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ಕಳಿಸಿದ್ದರು. ನನ್ನ ಮೊಬೈಲ್ ಮತ್ತು ಪರ್ಸ್ ಕಸಿದುಕೊಂಡಿದ್ದಾರೆ. ರೌಡಿ ಶೀಟರ್ ತೆರೆಯಲಾಗುವುದು ಎಂದಿದ್ದಾರೆ. ರಿವಾಲ್ವಾರ್ ಇಟ್ಟು ಎನ್‌ಕೌಂಟರ್‌ ಮಾಡಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ’ ಎಂದು ಕಣ್ಣೀರುಗರೆದರು.

ಶಾಂತಕುಮಾರ ಸ್ವಾಮಿ ಅವರ ಈ ವೃತ್ತಾಂತವನ್ನು ಸಮಾಧಾನ ಚಿತ್ತದಿಂದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ಅವರಿಗೆ ನಿರ್ದೇಶನ ನೀಡಿ, ‘ಯಾವ ಪೊಲೀಸ್‌ ಅಧಿಕಾರಿ ಇವರಿಗೆ ಇಂತಹ ಕಿರಕುಳ ನೀಡುತ್ತಿದ್ದಾರೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ. ಒಂದು ವೇಳೆ ಇವರ ಆರೋಪ ನಿಜವಾಗಿದ್ದರೆ ಆ ಪೊಲೀಸ್ ಅಧಿಕಾರಿ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಖಡಕ್‌ ತಾಕೀತು ಮಾಡಿದರು. ಅಂತೆಯೇ, ‘ಒಂದು ವೇಳೆ ಆರೋಪ ಸುಳ್ಳಾಗಿದ್ದರೆ ಫಿರ್ಯಾದುದಾರರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿ, ವಿಚಾರಣೆಯನ್ನು ಬುಧವಾರಕ್ಕೆ (ಆ.7) ಮುಂದೂಡಿದರು. 

‘ಭಾಷಾ ದೋಷಗಳು ಶಾಸನದ ಉದ್ದೇಶಕ್ಕೇ ಕೊಳ್ಳಿ ಇಡಬಲ್ಲವು’
ಬೆಂಗಳೂರು: ‘ಭಾಷಾ ದೋಷಗಳು ಶಾಸನದ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತವೆ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ‘ಶಾಸನ ರಚನಾ ಪ್ರಕ್ರಿಯೆಯನ್ನು ಸಾಕಷ್ಟು ಕಾಳಜಿ, ಎಚ್ಚರಿಕೆ ಹಾಗೂ ಪರಿಣತಿಯ ನೆಲೆಗಟ್ಟಿನಲ್ಲಿ ಕೈಗೊಳ್ಳಬೇಕು’ ಎಂದು ಹೇಳಿದೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಜಮೀನು ಪರಭಾರೆ ನಿಷೇಧ) ಕಾಯ್ದೆ–1978ಕ್ಕೆ 2023ರ ಜುಲೈನಲ್ಲಿ ಮಾಡಲಾಗಿರುವ ತಿದ್ದುಪಡಿ ಕುರಿತಾದ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್‌ ಎ.ಪಾಟೀಲ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಜಮೀನಿನ ಸ್ವಾಮಿತ್ವ ನಿರಾಕರಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ದಾವಣಗೆರೆಯ ಗೌರಮ್ಮ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಪೀಠ, ‘ಕಾನೂನು ಭಾಷೆಯ ಮೂಲಕ ಮಾತನಾಡುತ್ತದೆ. ಭಾಷೆಯನ್ನು ಸರಿಯಾಗಿ ಬಳಕೆ ಮಾಡದೇ ಹೋದರೆ ಅದು ಯಾವ ಸಾರ್ಥಕತೆ ಈಡೇರಿಸಬೇಕೊ ಅದು ಆಗುವುದಿಲ್ಲ. ಭಾಷಾ ದೋಷವಾದರೆ ಶಾಸನದ ಮೂಲ ಉದ್ದೇಶಕ್ಕೇ ಸೋಲಾಗುತ್ತದೆ’ ಎಂದು ಹೇಳಿದೆ. ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿಹಿಡಿದಿರುವ ವಿಭಾಗೀಯ ನ್ಯಾಯಪೀಠವು, ‘ಜಮೀನಿನ ಸ್ವಾಮಿತ್ವ ಕೋರಿಕೆಯ ಅರ್ಜಿಗಳ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಿಂದ ಹೊರಬರಬೇಕು ಎನ್ನುವುದಾದರೆ ಶಾಸನದಲ್ಲಿ ಬೇರೆ ರೀತಿಯ ಪದಗಳನ್ನು ಬಳಕೆ ಮಾಡಬಹುದಿತ್ತು’ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಮಂಜೂರಾಗಿದ್ದ ಜಮೀನನ್ನು 1978ರ ಕಾಯ್ದೆ ಪ್ರಕಾರ ಪರಭಾರೆ ಮಾಡಿದ್ದರೂ ಕಾಲಮಿತಿ ಇಲ್ಲದೆ, ಸ್ವಾಮಿತ್ವ ಅರ್ಜಿ ಸಲ್ಲಿಸಬಹುದು. ಆದರೆ, ತಿದ್ದುಪಡಿ ಕಾಯ್ದೆಯನ್ನು ಪೂರ್ವಾನ್ವಯಗೊಳಿಸಲಾಗಿದೆ. ಸದ್ಯ ಈ ಕಾನೂನು ಚಾಲ್ತಿಯಲ್ಲಿ ಇದ್ದರೂ ಪುನಃ ಅದನ್ನು ಇನ್ನೊಂದು ಅಂಶವಾಗಿ ಸೇರ್ಪಡೆ ಮಾಡಿರುವುದು ಹಳೆಯದರ ಪ್ರತಿರೂಪದಂತಿದೆ ಅಷ್ಟೇ’ ಎಂದು ನ್ಯಾಯಪೀಠ ಹೇಳಿದೆ. ‘2023ನೇ ಸಾಲಿನ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಲಾದ ಅರ್ಜಿಯ ವಿಚಾರಣೆ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ, ತಿದ್ದುಪಡಿಯ ಸಿಂಧುತ್ವದ ಬಗ್ಗೆ ಯಾವುದೇ ಚರ್ಚೆ ಮಾಡಲಾಗದು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.