ಬೆಂಗಳೂರು: ‘ಸಂಸದ ಅನಂತರ ಕುಮಾರ್ ಹೆಗಡೆ ಪ್ರಚೋದನಕಾರಿಯಾಗಿ ಮಾತನಾಡುತ್ತಿರುವುದನ್ನು ಪೊಲೀಸ್ ಇಲಾಖೆ ಗಮನಿಸುತ್ತಿದೆ. ಅವರ ವಿರುದ್ಧದ ಕ್ರಮದ ಕುರಿತು ಪೊಲೀಸರೇ ನಿರ್ಧರಿಸುತ್ತಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಭಟ್ಕಳದ ಚಿನ್ನದಪಳ್ಳಿ ಮಸೀದಿ ಧ್ವಂಸ ಮಾಡುವುದಾಗಿ ಹೇಳಿರುವುದು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿ ಹೆಗಡೆ ನೀಡಿರುವ ಹೇಳಿಕೆ ಕುರಿತು ಗೃಹ ಸಚಿವರು ಮಾಧ್ಯಮ ಪ್ರತಿನಿಧಿಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.
‘ಸಂಸದರು ಪ್ರಚೋದನಕಾರಿಯಾಗಿ, ಅಸಂಬದ್ಧವಾಗಿ ಮಾತನಾಡಿರುವುದು ಮತ್ತು ವೈಯಕ್ತಿಕವಾಗಿ ನಿಂದಿಸಿ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಪ್ರಕರಣ ದಾಖಲಿಸುವಂತೆ ನಾನು ಪೊಲೀಸರಿಗೆ ನಿರ್ದೇಶನ ನೀಡಿಲ್ಲ. ಆದರೆ, ಪೊಲೀಸರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದರು.
‘ಸಾರ್ವಜನಿಕ ಜೀವನದಲ್ಲಿ ಇರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಈ ರೀತಿ ಪ್ರಚೋದನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಆ ಮಾತುಗಳಿಂದ ಆಗುವ ಪರಿಣಾಮಗಳಿಗೆ ಅವರೇ ಹೊಣೆಯಾಗಬೇಕಾಗುತ್ತದೆ’ ಎಂದು ಹೇಳಿದರು.
‘ಅನಂತಕುಮಾರ್ ಹೆಗಡೆ ಅವರು ಸಂಸದರಾಗಿದ್ದಾರೆ. ಕೇಂದ್ರ ಸಚಿವರಾಗಿದ್ದವರು. ಜವಾಬ್ದಾರಿಯಿಂದ ಮಾತನಾಡಬೇಕು. ಚುನಾವಣೆ ಸಮೀಪಿಸುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಚುನಾವಣೆಗಾಗಿ ಶಾಂತಿ ಕದಡುವ ಕೆಲಸ ಮಾಡಬಾರದು’ ಎಂದರು.
ಮುಖ್ಯಮಂತ್ರಿಯವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರಿಗೆ ಪ್ರೇರೇಪಣೆ ಕೊಟ್ಟಿದ್ದಾರೋ ಗೊತ್ತಿಲ್ಲ. ಶ್ರೀರಾಮನೇ ಅವರಿಗೆ ಒಳ್ಳೆಯ ಬುದ್ಧಿ ಕೊಡಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.