ADVERTISEMENT

ವೇದಾವತಿಯಲ್ಲಿ ರಾಜಕೀಯ ಹೈಡ್ರಾಮಾ: ಕಾಲುವೆ ಬಳಿ ಇಡೀ ರಾತ್ರಿ ಕಳೆದ ಶ್ರೀರಾಮುಲು

ಕಾಲುವೆ ಬಳಿ ಇಡೀ ರಾತ್ರಿ ಕಾಲ ಕಳೆದ ಸಚಿವ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 19:37 IST
Last Updated 2 ನವೆಂಬರ್ 2022, 19:37 IST
ಬಳ್ಳಾರಿ ತಾಲ್ಲೂಕಿನ ಬಿ.ಡಿ. ಹಳ್ಳಿಯ ವೇದಾವತಿ ಸೇತುವೆ ಕೆಳಗೆ ಮಂಗಳವಾರ ರಾತ್ರಿ ಮಲಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು
ಬಳ್ಳಾರಿ ತಾಲ್ಲೂಕಿನ ಬಿ.ಡಿ. ಹಳ್ಳಿಯ ವೇದಾವತಿ ಸೇತುವೆ ಕೆಳಗೆ ಮಂಗಳವಾರ ರಾತ್ರಿ ಮಲಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು   

ಬಳ್ಳಾರಿ: ಪ್ರವಾಹದಲ್ಲಿ ಕೊಚ್ಚಿಹೋದ ತುಂಗಭದ್ರಾ ಕೆಳಹಂತದ ಕಾಲುವೆಯ ಪಿಲ್ಲರ್‌ ರಿಪೇರಿ ಕೆಲಸ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ ಇಡೀ ರಾತ್ರಿ ಕಾಲುವೆ ಬಳಿ ಕಾಲಕಳೆದ ‘ಹೈ ಡ್ರಾಮಾ’ಕ್ಕೆ ವೇದಾವತಿ (ಹಗರಿ) ನದಿ ಸಾಕ್ಷಿಯಾಯಿತು.

ರಾಹುಲ್‌ ಗಾಂಧಿಯವರ ‘ಭಾರತ್‌ ಜೋಡೊ ಯಾತ್ರೆ‘ ಮತ್ತು ಬಿಜೆಪಿ ‘ಜನ ಸಂಕಲ್ಪ ಯಾತ್ರೆ‘ ಬಳಿಕ ಜಿಲ್ಲೆಯಲ್ಲಿ ರಾಜಕೀಯ ಗರಿಗೆದರಿದ್ದು, ತುಂಗಭದ್ರಾ ಎಲ್ಎಲ್‌ಸಿ ಕಾಲುವೆಯಲ್ಲಿ ನೀರು ಹರಿಸುವ ವಿಚಾರ ಮಂಗಳವಾರ, ಬುಧವಾರ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿಗೆ ಕಾರಣವಾಯಿತು.

ಇದರ ಬೆನ್ನಲ್ಲೇ ಆಂಧ್ರ ಕಾರ್ಮಿಕ ಸಚಿವ ಗುಮ್ಮನೂರು ಜಯರಾಂ, ಆಧೋನಿ ಶಾಸಕ ಸಾಯಿ ಪ್ರಸಾದ್ ರೆಡ್ಡಿ ಅವರೂ ನದಿ ತಟಕ್ಕೆ ಬಂದು ಅಧಿಕಾರಿಗಳಿಂದ ಕಾಮಗಾರಿಯ ಮಾಹಿತಿ ಪಡೆದರು.

ADVERTISEMENT

ಬಳ್ಳಾರಿಗೆ 20 ಕಿ.ಮೀ ದೂರದ ಬೈರದೇವರಹಳ್ಳಿಯ ಬಳಿ ವೇದಾವತಿ ನದಿಗೆ ಕಟ್ಟಲಾಗಿರುವ ತುಂಗಭದ್ರಾ ಕೆಳಹಂತದ ಕಾಲುವೆಯ 15ನೇ ಪಿಲ್ಲರ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ತಾತ್ಕಾಲಿಕ ಪಿಲ್ಲರ್‌ ನಿರ್ಮಿಸುವ ಕೆಲಸ ಹಗಲು– ರಾತ್ರಿ ನಡೆಯುತ್ತಿದೆ.

ಈ ಸ್ಥಳಕ್ಕೆ ಅಕ್ಟೋಬರ್‌ 29ರಂದು ನಾಗೇಂದ್ರ ಭೇಟಿ ನೀಡಿ, ನವೆಂಬರ್‌ 1ರಿಂದ ನೀರು ಬಿಡಿಸುವುದಾಗಿ ರೈತರಿಗೆ ಭರವಸೆ
ನೀಡಿದ್ದರು.

ಈ ಮಧ್ಯೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ನವೆಂಬರ್‌ 1ರಂದು ಮಂಗಳವಾರ ಮಧ್ಯಾಹ್ನ ಸ್ಥಳಕ್ಕೆ ಬಂದಿದ್ದು, ಕಾಲುವೆಗೆ ನೀರು ಹರಿಸುವವರೆಗೆ ಅಲ್ಲೇ ಮೊಕ್ಕಾಂ ಹೂಡುವುದಾಗಿ ಪ್ರಕಟಿಸಿದರು. ‘ನಾನು ಬಂದಿದ್ದರಿಂದಎಂದು ಮೂರು ದಿನದಲ್ಲಿ ಆಗುವ ಕೆಲಸ ಎರಡು ದಿನಗಳಲ್ಲಿ ಆಗಿದೆ. ತಕ್ಷಣ ನೀರು ಕೊಡದಿದ್ದರೆ ಕರ್ನಾಟಕ ಹಾಗೂ ಆಂಧ್ರದ ಮೂರು ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾಳಾಗಲಿದೆ ಎಂಬ ಕಾರಣಕ್ಕೆ ಬಂದಿದ್ದೇನೆ’ ಎಂದುಸಚಿವರು ಹೇಳಿದರು.

ಸಚಿವರೇ ನದಿ ದಂಡೆಯಲ್ಲಿ ಬೀಡು ಬಿಟ್ಟಿದ್ದರಿಂದ ಇಡೀ ಜಿಲ್ಲಾಡಳಿತವೇ ಸ್ಥಳಕ್ಕೆ ದೌಡಾಯಿಸಿತ್ತು. ಜಿಲ್ಲಾಧಿಕಾರಿ ಪವನ ಕುಮಾರ್‌ ಮಾಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ್‌, ಎಸ್‌.ಪಿ ರಂಜಿತ್‌ ಕುಮಾರ್‌ ಬಂಡಾರು, ತಹಶೀಲ್ದಾರ್‌ ವಿಶ್ವನಾಥ್‌ ಸೇರಿದಂತೆ ಎಲ್ಲ ಅಧಿಕಾರಿಗಳು ಸಚಿವರ ಜತೆಯಲ್ಲೇ ಇದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ನಾಗೇಂದ್ರ ಮಧ್ಯರಾತ್ರಿಯೇ ಬೆಂಬಲಿಗರೊಂದಿಗೆ ಸ್ಥಳಕ್ಕೆ ಧಾವಿಸಿದರು. ‘ಕ್ಯಾಂಪ್‌ ಫೈರ್‌’ ಹಾಕಿಕೊಂಡು ಬೆಂಕಿ ಕಾಯಿಸುತ್ತಾ ಕುಳಿತಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ರೈತರಿಗೆ ನೀರು ಕೊಡಿಸಿಯೇ ಜಾಗ ಬಿಡುವುದಾಗಿ ಶಪಥ ಮಾಡಿದ್ದರೆ, ಅತ್ತ ರಿಪೇರಿ ಕೈಗೊಂಡಿರುವ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಕೈಕೈ ಹಿಸುಕಿಕೊಳ್ಳುತ್ತಿದ್ದರು. ಇವರಿಂದಾಗಿ ಕೆಲಸ ವಿಳಂಬವಾಗುತ್ತಿದೆ ಎಂದು ತೆರೆಮರೆಯಲ್ಲಿ ದೂರುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.