ADVERTISEMENT

ಹಿನ್ನೋಟ-2020: ವೈಟ್‌ ಕಾಲರ್‌ ಅಪರಾಧಿಗಳ ಮುಖವಾಡ ಕಳಚಿದ ವರ್ಷ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 19:40 IST
Last Updated 28 ಡಿಸೆಂಬರ್ 2020, 19:40 IST
ಡಿ.ಜೆ. ಹಳ್ಳಿ ಗಲಭೆಯಲ್ಲಿ ಸುಟ್ಟು ಕರಕಲಾದ ವಾಹನಗಳು - –ಸಂಗ್ರಹಚಿತ್ರ
ಡಿ.ಜೆ. ಹಳ್ಳಿ ಗಲಭೆಯಲ್ಲಿ ಸುಟ್ಟು ಕರಕಲಾದ ವಾಹನಗಳು - –ಸಂಗ್ರಹಚಿತ್ರ   

2020ನೇ ವರ್ಷ ರಾಜ್ಯದ ಅನೇಕ ವೈಟ್‌ ಕಾಲರ್‌ ಅಪರಾಧಿಗಳ ಮುಖವಾಡ ಕಳಚಿಹಾಕಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮಾಜಿ ಮೇಯರ್‌, ಸಿನಿಮಾ ನಟಿಯರು, ಉದ್ಯಮಿಗಳು ಜೈಲು ಪಾಲಾದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸಣ್ಣದೊಂದು ಪೋಸ್ಟ್‌ನಿಂದ ಉದ್ರಿಕ್ತಗೊಂಡ ಗುಂಪೊಂದು, ಗಲಭೆ ಸೃಷ್ಟಿಸಿ ಶಾಸಕರ ಮನೆ ಹಾಗೂ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿತು...

ವರ್ಷದ ಆರಂಭದಲ್ಲಿ ಕೊಲೆ, ದರೋಡೆ, ಕಳ್ಳತನ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದ್ದವು. ಕೊರೊನಾ ಸೋಂಕು ತಡೆಗೆ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಅಪರಾಧ ಕೃತ್ಯಗಳಿಗೆ ಲಗಾಮು ಬಿದ್ದಿತ್ತು. ಮದ್ಯ ಮಾರಾಟ ಬಂದ್ ಮಾಡಿದ್ದರಿಂದ, ಮದ್ಯದಂಗಡಿ ಕಳ್ಳತನ ಪ್ರಕರಣಗಳು ಮಾತ್ರ ಹೆಚ್ಚಾಗಿದ್ದವು. ಲಾಕ್‌ಡೌನ್‌ ತೆರವಿಗೂ ಮುನ್ನವೇ ಮದ್ಯ ಮಾರಾಟ ಶುರುವಾಗಿ ಬೆಂಗಳೂರಿನಲ್ಲಿ ಕೊಲೆಗಳ ಸರಣಿಯೂ ಆರಂಭವಾಯಿತು.

ಆಗಸ್ಟ್‌ 11: ಪೊಲೀಸರ ಪಾಲಿಗೆ ಆಗಸ್ಟ್ 11ರ ರಾತ್ರಿ, ಕರಾಳ ರಾತ್ರಿಯಾಗಿತ್ತು. ಬೆಂಗಳೂರಿನ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆ ಎದುರು ಸೇರಿದ್ದ ಗುಂಪು, ಸಣ್ಣದಾಗಿ ಪ್ರತಿಭಟನೆ ಆರಂಭಿಸಿತ್ತು. ಕೆಲ ನಿಮಿಷಗಳಲ್ಲೇ ಗುಂಪು ಠಾಣೆಗೆ ನುಗ್ಗಿ ಕಲ್ಲು ತೂರಾಟ ನಡೆಸಿತು. ಪೊಲೀಸರ ಬಂದೂಕು ಕಿತ್ತುಕೊಳ್ಳಲು ಯತ್ನಿಸಿತು. ಠಾಣೆ, ಪೊಲೀಸ್ ವಾಹನಗಳು ಹಾಗೂ ರಸ್ತೆಯಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿತ್ತು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ನುಗ್ಗಿ ಸುಲಿಗೆ ಮಾಡಿ, ಮನೆಗೆ ಬೆಂಕಿಹಚ್ಚಿತು. ಗಲಭೆ ನಿಯಂತ್ರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾದರು.

ADVERTISEMENT

‘ರಾಜಕೀಯ ವೈಷಮ್ಯವೇ ಗಲಭೆಗೆ ಕಾರಣ’ ಎಂಬುದು ಸಿಸಿಬಿ ತನಿಖೆಯಿಂದ ಸಾಬೀತಾಗಿ, ಮಾಜಿ ಮೇಯರ್ ಆರ್. ಸಂಪತ್‌ರಾಜ್, ಮಾಜಿ ಕಾರ್ಪೋರೇಟರ್‌ ಜಾಕೀರ್ ಸೇರಿದಂತೆ ಹಲವರು ಜೈಲು ಪಾಲಾದರು.

ಡ್ರಗ್ಸ್: ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದ ಡ್ರಗ್ಸ್‌ ಜಾಲವನ್ನು ಸಿಸಿಬಿ ಭೇದಿಸಿತು. ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಡ್ರಗ್ಸ್ ಪೆಡ್ಲರ್‌ಗಳು ಜೈಲು ಸೇರಿದರು. ಉದ್ಯಮಿ ಲೋಕನಾಥನ್ ಅವರ ಪುತ್ರ ವಿದ್ವತ್‌ ಕೊಲೆ ಯತ್ನ ಪ್ರಕರಣದಲ್ಲಿ ಪರಾರಿಯಾಗಿದ್ದ, ಅಂತರರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಸಹ ಇದೇ ವರ್ಷ ಸಿಕ್ಕಿಬಿದ್ದ. ಕಾಂಗ್ರೆಸ್‌ ಮುಖಂಡರೂ ಆಗಿರುವ ಮಾಜಿ ಸಚಿವ ಹಾವೇರಿಯ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌, ಡ್ರಗ್ಸ್ ಪ್ರಕರಣದಲ್ಲೇ ಬಲೆಗೆ ಬಿದ್ದ. ಮೇಲಿಂದ ಮೇಲೆ ನಡೆದ ಪೊಲೀಸರ ದಾಳಿಗಳು, ವೈಟ್‌ಕಾಲರ್‌ಗಳ ಬಣ್ಣ ಬಯಲು ಮಾಡಿದವು.

ಮಾಜಿ ಶಾಸಕ ಬಂಧನ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ಗೌಡ ಅವರ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರೂ ಆದ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಜೈಲಿಗಟ್ಟಿದ್ದಾರೆ.

ಬ್ಯಾಂಕ್ ಅಧ್ಯಕ್ಷ ಬಂಧನ: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಕ್ರೆಡಿಟ್ ಕೋ–ಆಪರೇಟಿವ್ ಲಿಮಿಟೆಡ್‌ನ ಠೇವಣಿದಾರರ ಹಣ ದುರ್ಬಳಕೆ ಪ್ರಕರಣವೂ ಇದೇ ವರ್ಷ ಹೊರಗೆ ಬಂತು. ಬ್ಯಾಂಕ್ ಅಧ್ಯಕ್ಷ ಕೆ. ರಾಮಕೃಷ್ಣ ಸೇರಿ ಹಲವರು ಜೈಲು ಪಾಲಾದರು.

ಐಎಂಎ, ಶಿವಕುಮಾರ್‌ ವಿರುದ್ಧ ಪ್ರಕರಣ
ಐ ಮಾನಿಟರಿ ಅಡ್ವೈಸರಿ (ಐಎಂಎ) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಸಿಬಿಐ ದಾಖಲಿಸಿದ ಪ್ರಕರಣಗಳು ರಾಜ್ಯದಲ್ಲಿ 2020ನೇ ಸಾಲಿನಲ್ಲಿ ಹೆಚ್ಚು ಸದ್ದು ಮಾಡಿದವು.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಶಿವಕುಮಾರ್‌ ಮತ್ತು ಕುಟುಂಬದವರ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ. ಅಕ್ಟೋಬರ್‌ 5ರಂದು ಬೆಂಗಳೂರು, ರಾಮನಗರ, ಹಾಸನ, ಮುಂಬೈ, ದೆಹಲಿ ಸೇರಿದಂತೆ ಹಲವೆಡೆ ದಾಳಿಮಾಡಿ, ಶೋಧ ನಡೆಸಲಾಗಿತ್ತು.

ಅಧಿಕಾರಿಗಳ ವಿರುದ್ದ ಜಾರ್ಜ್‌ಶೀಟ್: ಐಎಂಎ (ಐ–ಮಾನಿಟರಿ ಅಡ್ವೈಸರಿ) ಕಂಪನಿ ವಂಚನೆ ಪ್ರಕರಣದಲ್ಲಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್, ಐಎಎಸ್ ಅಧಿಕಾರಿ ಬಿ.ಎಂ. ವಿಜಯ್‌ಶಂಕರ್, ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಹಾಗೂ ಇತರರ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತು. ಇದರ ನಡುವೆಯೇ, ಐಎಎಸ್‌ ಅಧಿಕಾರಿ ವಿಜಯ್‌ಶಂಕರ್ ಆತ್ಮಹತ್ಯೆಗೆ ಶರಣಾದರು.

ನವೆಂಬರ್‌ 22ರಂದು ಮಾಜಿ ಸಚಿವ ರೋಷನ್‌ ಬೇಗ್‌ ಅವರನ್ನು ಬಂಧಿಸಿದ್ದ ಸಿಬಿಐ, ಅವರ ಮನೆಯಲ್ಲೂ ಶೋಧ ನಡೆಸಿತ್ತು. ಸದ್ಯ ರೋಷನ್‌ ಬೇಗ್‌ ಜಾಮೀನು ಪಡೆದು ಹೊರಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.