ಬೆಂಗಳೂರು: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮಂಡಿಸಿದ ಪರಿಷ್ಕೃತ ಮಸೂದೆ ವಿಧಾನ ಪರಿಷತ್‌ನಲ್ಲಿ ಮತ್ತೆ ಕೋಲಾಹಲಕ್ಕೆ ಕಾರಣವಾಯಿತು.
ವಿಧಾನಮಂಡಲದ ಕಳೆದ ಅಧಿವೇಶನದಲ್ಲಿ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್ ಒಪ್ಪಿಗೆ ದೊರಕಿರಲಿಲ್ಲ. ಸೋಮವಾರ ಆರಂಭವಾದ ವಿಧಾನಮಂಡಲ ಅಧಿವೇಶನದಲ್ಲಿ ಮೊದಲ ದಿನವೇ ಕಂದಾಯ ಸಚಿವ ಆರ್. ಅಶೋಕ ಅವರು ಮಸೂದೆಗೆ ಒಪ್ಪಿಗೆ ಪಡೆಯಲು ಪ್ರಯತ್ನಿಸಿದರು.
ಮಸೂದೆಯ ಕುರಿತು ವಿಸ್ತೃತ ಚರ್ಚೆ ಆಗಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು. ಸೋಮವಾರವೇ ಒಪ್ಪಿಗೆ ನೀಡಬೇಕೆಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು.
ಚರ್ಚೆಯ ನಡುವೆಯೇ ರೈತ ಸಂಘಟನೆಗಳು ಕರೆ ನೀಡಿರುವ ಮಂಗಳವಾರದ ಬಂದ್ ಕುರಿತೂ ಪ್ರಸ್ತಾಪವಾಯಿತು. ಬಂದ್ ಬೆಂಬಲಿಸುವಂತೆ ವಿರೋಧ ಒಕ್ಷದ ನಾಯಕ ಎಸ್.ಆರ್. ಪಾಟೀಲ ಮನವಿ ಮಾಡಿದರು.
‘ನಾವೆಲ್ಲ ರೈತರು ಬೆಳೆದ ಅನ್ನ ತಿನ್ನುವವರು. ನೀವೂ ಅದನ್ನೇ ತಿನ್ನುತ್ತೀರಿ ಎಂದು ಭಾವಿಸಿರುವೆ’ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಎರಡೂ ಪಕ್ಷಗಳ ಸದಸ್ಯರು ಪರಸ್ಪರರ ವಿರುದ್ಧ ಧಿಕ್ಕಾರ ಕೂಗಿದರು.
ಮಂಗಳವಾರ ಇಡೀ ದಿನ ಮಸೂದೆಯ ಕುರಿತು ಚರ್ಚೆಗೆ ಅವಕಾಶ ಕಲ್ಪಿಸುವಂತೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಆಗ್ರಹಿಸಿದರು. ಬಿಜೆಪಿ ಸದಸ್ಯರು ಈ ಬೇಡಿಕೆಯನ್ನು ವಿರೋಧಿಸಿದರು. ವಾಕ್ಸಮರ ಮುಂದುವರೆಯಿತು. ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಸದನದ ಕಲಾಪವನ್ನು ಮಂಗಳವಾರ ಬೆಳಿಗ್ಗೆ 11ಕ್ಕೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.