ADVERTISEMENT

ಮೋದಿ ಮಾಧ್ಯಮಗಳ ಮೈಕ್ ಕಂಡರೆ ಎಕೆ–47 ಗನ್ ಕಂಡಂತೆ ಹೆದರುತ್ತಾರೆ: ಕಾಂಗ್ರೆಸ್ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮೇ 2022, 9:17 IST
Last Updated 4 ಮೇ 2022, 9:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮಗಳ ಮೈಕ್ ಕಂಡರೆ ಎಕೆ–47 ಗನ್‌ ಕಂಡಂತೆ ಹೆದರುತ್ತಾರೆ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಗಂಗಾ ನದಿಯಲ್ಲಿ ಕೋವಿಡ್ ಮೃತದೇಹಗಳು ತೇಲಿದಾಗ, ಚೀನಾ ನಮ್ಮ ದೇಶದ 20 ಮಂದಿ ಯೋಧರನ್ನು ಹತ್ಯೆ ಮಾಡಿದಾಗ, ಪುಲ್ವಾಮ ದಾಳಿಯಲ್ಲಿ 40 ಯೋಧರು ಮಡಿದಾಗ ಬಾರದ ‘ಓಹ್ ಮೈ ಗಾಡ್’ ಉದ್ಘಾರ ಮಾಧ್ಯಮಗಳ ಮೈಕ್ ಎದುರಾದಾಗ ಬರುತ್ತದೆ ಎಂದರೆ ಅದೆಷ್ಟು ಗಾಬರಿಯಾಗಿರಬಹುದು’ ಎಂದು ಪ್ರಶ್ನಿಸಿದೆ.

‘ರಾಹುಲ್ ಗಾಂಧಿಯವರು ಆಹ್ವಾನದ ಮೇರೆಗೆ ಸ್ನೇಹಿತರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರೇ ಹೊರತು ಆಹ್ವಾನವಿಲ್ಲದಿದ್ದರೂ ಪಾಕಿಸ್ತಾನದ ಬಿರಿಯಾನಿ ತಿನ್ನಲು ಹೋಗಿರಲಿಲ್ಲ. ಪುಲ್ವಾಮ ದಾಳಿಯ ಸಂಗತಿ ತಿಳಿದರೂ ನಿರ್ಲಕ್ಷಿಸಿ ಶೂಟಿಂಗ್‌ನಲ್ಲಿ ನಿರತರಾಗಿದ್ದ ತಮ್ಮ ನಾಯಕನಿಗೆ (ಮೋದಿ) ಬಿಜೆಪಿಗರು ಮೊದಲು ಬುದ್ದಿ ಹೇಳಿಕೊಳ್ಳಲಿ’ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ADVERTISEMENT

ರಾಹುಲ್ ಗಾಂಧಿಯವರು ಮದುವೆ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದು, ಜಗತ್ತಿನ ಅತಿ ದೊಡ್ಡ ಪ್ರಮಾದ ಎನ್ನುತ್ತಿರುವ ಬಿಜೆಪಿ ಉತ್ತರಿಸಲಿ. ಬಿಜೆಪಿ ನಾಯಕರಾದ ಪ್ರಕಾಶ್‌ ಜಾವಡೇಕರ್‌ ಅವರು ಇದೇನು ಗೋಮೂತ್ರ ಪ್ರೋಕ್ಷಣೆ ಮಾಡುತ್ತಿರುವುದೇ ಅಥವಾ ಪವಿತ್ರ ಗಂಗಾಜಲವನ್ನು ಬಾಟಲಿಯಲ್ಲಿ ತುಂಬಿಕೊಂಡು ಸಿಂಪಡಿಸುತ್ತಿರುವುದೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ 12 ಸೆಕೆಂಡ್‌ಗಳ ವಿಡಿಯೊವೊಂದನ್ನು ಮಂಗಳವಾರ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವೀಟ್ ಮಾಡಿದ್ದು, ‘ಕಾಂಗ್ರೆಸ್‌ ಬಿಕ್ಕಟ್ಟಿನಲ್ಲಿರುವಾಗ ರಾಹುಲ್ ನೈಟ್‌ಕ್ಲಬ್‌ನಲ್ಲಿ ಇದ್ದಾರೆ’ ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್‌, ಮದುವೆ ಸಮಾರಂಭದಲ್ಲಿ ಭಾಗಿಯಾಗುವುದು ಅಪರಾಧವಲ್ಲ ಎಂದು ತಿರುಗೇಟು ನೀಡಿತ್ತು.

ರಾಹುಲ್ ಗಾಂಧಿ ಅವರು ಯುವತಿಯೊಬ್ಬರ ಜತೆಗೆ ಪಾರ್ಟಿಯೊಂದರಲ್ಲಿ ಇರುವ ದೃಶ್ಯವು ಮಾಳವೀಯ ಟ್ವೀಟ್‌ ಮಾಡಿರುವ ವಿಡಿಯೊದಲ್ಲಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.