ADVERTISEMENT

ರಾಮಮಂದಿರ ವಿಷಯದಲ್ಲಿ ಕಾಂಗ್ರೆಸ್‌ನಿಂದ ದ್ವೇಷದ ರಾಜಕಾರಣ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 9:46 IST
Last Updated 1 ಜನವರಿ 2024, 9:46 IST
ಆರ್‌. ಅಶೋಕ
ಆರ್‌. ಅಶೋಕ   

ಬೆಂಗಳೂರು: ‘ರಾಮ ಜನ್ಮಭೂಮಿಯಲ್ಲಿ ರಾಮನ ಪ್ರತಿಷ್ಠಾಪನೆ ಐತಿಹಾಸಿಕ ಕ್ಷಣ. ಇಡೀ ಪ್ರಪಂಚ ಅತ್ತ ನೋಡುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ದೂರಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹುಬ್ಬಳ್ಳಿಯಲ್ಲಿ ಹಿಂದೆ ಯಾರೆಲ್ಲಾ ರಾಮಜನ್ಮ ಭೂಮಿಗಾಗಿ ಹೋರಾಟ ಮಾಡಿದ್ದರೊ ಅವರನ್ನು ಬಂಧಿಸಲಾಗಿದೆ. ಸುಮಾರು 30 ವರ್ಷಗಳ ಹಿಂದೆ ನಡೆದ ಪ್ರಕರಣವದು. ಮೂವತ್ತು ವರ್ಷಗಳ ಹಿಂದಿನ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ಈಗ ತೆಗೆದಿದೆ. ಇದು ನಾಚಿಕೆಗೇಡಿನ‌ ಸಂಗತಿ’ ಎಂದರು.

‘ರಾಮಜನ್ಮಭೂಮಿ ಹೋರಾಟದ ವೇಳೆ ನಡೆದ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ರಾಮನ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದೇ ಇದ್ದರೆ, ಬಿಜೆಪಿ ಪ್ರತಿಭಟನೆಗೆ ಇಳಿಯಲಿದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ನಾವೂ ರಾಮನ ಭಕ್ತರು’ ಎಂದು ಗೃಹ ಸಚಿವ ಜಿ. ಪರಮೇಶ್ವರ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ, ‘ರಾಮನನ್ನು ಆರಾಧಿಸುವುದಾದರೆ ರಾಮನವಮಿ ಮಾಡಬೇಕು. ಕಾಂಗ್ರೆಸ್‌ನವರದ್ದು ಟಿಪ್ಪು ಸಂಸ್ಕೃತಿ. ಕುಂಕುಮ ಹಚ್ಚಿದರೆ ಆಗಲ್ಲ. ತಿಲಕ ಇಟ್ಟರೂ ಆಗುವುದಿಲ್ಲ. ಸಿದ್ಧರಾಮಯ್ಯರಿಗೆ ಕೇಸರಿ ಪೇಟಾ ಅಂದರೆ ಆಗುವುದಿಲ್ಲ’ ಎಂದು ಕುಟುಕಿದರು.

‘ಯಾವ್ಯಾವ ಜಾತಿಯನ್ನು ಒಡೆಯಬೇಕು ಎಂಬುದನ್ನು ಸಿದ್ಧರಾಮಯ್ಯ ಅವರಿಂದ ಕಲಿಯಬೇಕು. ಒಡೆದು ಆಳುವುದಕ್ಕೆ ಸಿದ್ಧರಾಮಯ್ಯ ಬ್ರ್ಯಾಂಡ್ ಅಂಬಾಸಿಡರ್’ ಎಂದು ವ್ಯಂಗ್ಯವಾಡಿದರು. 

‘ಚುನಾವಣೆ ಆದ ಬಳಿಕ ಸರ್ಕಾರ ಬದಲಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ವಿಜಯೇಂದ್ರ ಕೂಡ ಅದನ್ನೇ ಹೇಳಿದ್ದಾರೆ. ಅವರಿಗೆ ಆ ಬಗ್ಗೆ ಮಾಹಿತಿ ಇರಬಹುದು’ ಎಂದರು. 

‘ಲೋಕಸಭಾ ಚುನಾವಣೆ ಆದ ಮೇಲೆ ಏನು ಬೇಕಾದರೂ ಆಗಬಹುದು. ನನಗೆ ಇರುವ ಮಾಹಿತಿ ಈಗ ಹೇಳುವುದಿಲ್ಲ. ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ. ಈ ಸರ್ಕಾರ ಬಂದು‌ ಏಳು ತಿಂಗಳಾಯಿತು.  ಈವರೆಗೂ ಒಂದೇ ಒಂದು ಕೆಲಸ ಆಗಿಲ್ಲ ಎಂದು ಅವರ ಪಕ್ಷದ ನಾಯಕರೇ ಹೇಳುತ್ತಿದ್ದಾರೆ. ಮುಂದೆ ಏನೇನೂ ಆಗುತ್ತದೋ ನೋಡೋಣ’ ಎಂದರು.

‘ಸರ್ಕಾರದ ವಿರುದ್ಧ ಯಾರು ಮಾತನಾಡುತ್ತಾರೊ ಅವರಿಗೆ ಹುದ್ದೆ ಸಿಗುತ್ತದೆ. ಈಗಲೂ ಹಾಗೇ ಆಗಿದೆ. ಸರ್ಕಾರದ ವಿರುದ್ಧ ಮಾತನಾಡಿದ ಬಸವರಾಜ ರಾಯರೆಡ್ಡಿ, ಆರ್.ವಿ. ದೇಶಪಾಂಡೆ, ಬಿ.ಆರ್. ಪಾಟೀಲ್‌ಗೆ ಹುದ್ದೆ ಕೊಟ್ಟಿದ್ದಾರೆ. ಕಾಂಗ್ರೆಸ್‌ನಲ್ಲಿ ಈ ಸಂಸ್ಕೃತಿ ಇದೆ. ಈ ಹಿಂದೆ ರಮೇಶ್‌ಕುಮಾರ್ ಅವರು ಸರ್ಕಾರದ ವಿರುದ್ಧ ಮಾತನಾಡಿದ್ದರು. ನಂತರ ಅವರನ್ನು ಮಂತ್ರಿ ಮಾಡಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.