ADVERTISEMENT

ಮಾಲಿನ್ಯ ರಹಿತ ಉಕ್ಕು ಉತ್ಪಾದನೆ: ಎಚ್.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:22 IST
Last Updated 21 ನವೆಂಬರ್ 2024, 15:22 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಬೆಂಗಳೂರು: ಉಕ್ಕು ಉತ್ಪಾದನಾ ಪ್ರಕ್ರಿಯೆಯ ವೇಳೆ ಆಗುತ್ತಿರುವ ವಾಯುಮಾಲಿನ್ಯವನ್ನು 2027ರ ವೇಳೆಗೆ ಶೂನ್ಯಮಟ್ಟಕ್ಕೆ ತರಲು ಶ್ರಮಿಸಲಾಗುತ್ತಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಭಾರತೀಯ ಲೋಹ ಸಂಸ್ಥೆ (ಐಐಎಂ) ಹಮ್ಮಿಕೊಂಡಿದ್ದ ‘ಲೋಹಶಾಸ್ತ್ರಜ್ಞ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಶೇಷ ಉಕ್ಕು, ಹಸಿರು ಉಕ್ಕು ತಯಾರಿಕೆಗೆ ಆದ್ಯತೆ ನೀಡಲಾಗಿದೆ. ಉಕ್ಕಿನ ಸುಸ್ಥಿರ ಉತ್ಪಾದನೆಗೆ ಜಲಜನಕ ಆಧಾರಿತ ಉಕ್ಕು ತಯಾರಿಕೆ ಮತ್ತು ಮರು ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ಉತ್ಪಾದನಾ ಸಂಪರ್ಕ ಉಪಕ್ರಮ ಸೇರಿದಂತೆ ಹಲವಾರು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಜಾರಿಮಾಡಲಾಗಿದೆ ಎಂದರು.

ADVERTISEMENT

ಭಾರತ ಜಗತ್ತಿನ ಐದನೇ ಬೃಹತ್ ಆರ್ಥಿಕ ಶಕ್ತಿಯಾಗುತ್ತಿದೆ. ಈ ಪ್ರಯತ್ನಕ್ಕೆ ಉಕ್ಕು ಉದ್ಯಮ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಉಕ್ಕು ಕ್ಷೇತ್ರದಲ್ಲಿ ಸುಸ್ಥಿರ ಮತ್ತು ಚಲನಶೀಲ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಅದಕ್ಕೆ ಪೂರಕವಾಗಿ ನಿರ್ದಿಷ್ಟ ಕಾರ್ಯಸೂಚಿಗಳನ್ನು ರೂಪಿಸಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯ ನೀಡುವುದರ ಜತೆಗೆ, ಜಾಗತಿಕ ಪರಿಸರ ಸಮತೋಲನ ರಾಷ್ಟ್ರೀಯ ಉಕ್ಕು ನೀತಿಯೂ ಬಲ ತುಂಬಿದೆ. ಭಾರತದ ಸಶಕ್ತ ಉದ್ಯಮವಾಗಿ ಹೊರಹೊಮ್ಮುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಶಯಗಳನ್ನು ನನಸು ಮಾಡುತ್ತಿದೆ ಎಂದು ಹೇಳಿದರು.

ಎಸ್ಆರ್‌ ಉಕ್ಕು ಸಂಸ್ಥೆಯ ಸಿಇಒ ಶಶಿ ಮೊಹಂತಿ ಅವರಿಗೆ ಉಕ್ಕು ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಜೀವಮಾನ ಸಾಧನೆ ಪ್ರಶಸ್ತಿ, ಡಾ.ಟಿ.ಪಿ.ಡಿ. ರಾಜನ್‌ ಅವರಿಗೆ ರಾಷ್ಟ್ರೀಯ ಲೋಹಶಾಸ್ತ್ರಜ್ಞ ಪ್ರಶಸ್ತಿ, ಡಾ.ಡಿ. ಸತೀಶ್‌ ಕುಮಾರ್‌ ಅವರಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಶಸ್ತಿ, ಡಾ.ಸಾಯಿ ಗೌತಮ್‌ ಕೃಷ್ಣನ್‌ ಮತ್ತು ಬಿರಾಜ್‌ಕುಮಾರ್‌ ಸಾಹು ಅವರಿಗೆ ಯುವ ಲೋಹಶಾಸ್ತ್ರಜ್ಞ ಪ್ರಶಸ್ತಿಯನ್ನು ಸಚಿವ ಕುಮಾರಸ್ವಾಮಿ ಪ್ರದಾನ ಮಾಡಿದರು.

ಭಾರತೀಯ ಲೋಹ ಸಂಸ್ಥೆ ಅಧ್ಯಕ್ಷ ಸಜ್ಜನ್‌ ಜಿಂದಾಲ್‌, ಭಾರತೀಯ ಉಕ್ಕು ಪ್ರಾಧಿಕಾರ (SAIL) ಅಧ್ಯಕ್ಷ ಅಮರೆಂದು ಪ್ರಕಾಶ್‌, ಭಾರತೀಯ ಲೋಹ ಸಂಸ್ಥೆ ಉಪಾಧ್ಯಕ್ಷ ಬಿ.ಎಸ್. ಮೂರ್ತಿ, ಬ್ರಿಗೇಡಿಯರ್‌ ಅರುಣ್‌ ಗಂಗೂಲಿ, ಸಂಸ್ಥೆಯ ಸಂಚಾಲಕ ಧೀರೇನ್‌ ಪಾಂಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.