ADVERTISEMENT

ಹೃದ್ರೋಗ ತಡೆಗೆ ಒಂದೇ ಮಾತ್ರೆ!

ಬೆಂಗಳೂರಿನ ಸೇಂಟ್ ಜಾನ್ಸ್–ಕೆನಡಾದ ಸಂಸ್ಥೆ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 0:03 IST
Last Updated 30 ಜುಲೈ 2023, 0:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೃದಯ ಸಂಬಂಧಿ ನಾಲ್ಕು ಸಮಸ್ಯೆಗಳ ನಿಯಂತ್ರಣಕ್ಕೆ ನಾಲ್ಕು ಮಾತ್ರೆಗಳ ಬದಲು, ಈ ಎಲ್ಲ ಸತ್ವಗಳನ್ನು ಒಳಗೊಂಡ ‘ಪಾಲಿಪಿಲ್‌’ ಎಂಬ ಒಂದೇ ಮಾತ್ರೆಯನ್ನು ಇನ್ನು ಬಳಸಬಹುದು. 

ನಗರದ ಸೇಂಟ್‌ ಜಾನ್ಸ್‌ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಕೆನಡಾದ ಜನಸಂಖ್ಯಾ ಆರೋಗ್ಯ ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನದ ಆಧಾರದ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಈ ಮಾತ್ರೆಯನ್ನು ಸೇರಿಸಿದೆ. ಇದು ಹೃದ್ರೋಗ ಸಂಬಂಧಿ ಕಾಯಿಲೆಗಳಿಂದ ಸಂಭವಿಸುವ ಮರಣದ ಸಾಧ್ಯತೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾಲ್ಕು ಮಾತ್ರೆಗಳು ಸಂಯೋಜನೆಯಲ್ಲಿ ಸಾಮಾನ್ಯ ರಕ್ತದೊತ್ತಡ ಕಡಿಮೆ ಮಾಡುವ ಮೂರು ಔಷಧಗಳು ಮತ್ತು ಕೊಬ್ಬಿನಾಂಶ ನಿಯಂತ್ರಿಸುವ ಒಂದು ಔಷಧವನ್ನು ಒಳಗೊಂಡಿರುತ್ತದೆ. 

ಹಲವು ಭಾರತೀಯರು ಅಧಿಕ ರಕ್ತದೊತ್ತಡ ಮತ್ತು ಕೊಬ್ಬಿನಾಂಶಗಳ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಅಧಿಕ ರಕ್ತದೊತ್ತಡ, ರಕ್ತವನ್ನು ತಿಳಿಗೊಳಿಸುವ ಹಾಗೂ ಕೊಬ್ಬಿನಾಂಶ ಕುಗ್ಗಿಸುವುದಕ್ಕೆ ತಮ್ಮ ಜೀವಿತಾವಧಿಯುದ್ದಕ್ಕೂ ಬಹು ಮಾತ್ರೆಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅಧಿಕ ಹಣವನ್ನು ವ್ಯಯ ಮಾಡುತ್ತಿದ್ದಾರೆ. ಈ ಎಲ್ಲ ಸತ್ವಗಳನ್ನು ಒಳಗೊಂಡ ಒಂದೇ ಮಾತ್ರೆಯನ್ನು ಬಳಸುವುದರಿಂದ ಖರ್ಚನ್ನು ಕಡಿಮೆ ಮಾಡಲು ಹಾಗೂ ಹೆಚ್ಚು ಸಂಖ್ಯೆಯ ಮಾತ್ರೆಗಳನ್ನು ತೆಗೆದುಕೊಳ್ಳುವ ತೊಂದರೆಯನ್ನು ನಿವಾರಿಸಲು ಸಾಧ್ಯವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

‘ಪಾಲಿಪಿಲ್‌ ಮಾತ್ರೆಯನ್ನು ಭಾರತದ ಅಗತ್ಯ ಔಷಧಿಗಳ ಪಟ್ಟಿಯಲ್ಲಿ, ನಂತರ ದೇಶದ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲೂ ಬಳಸುವ ಸಾಧ್ಯತೆ ಇದೆ. ಇದು ಹೊಸ ಔಷಧವಲ್ಲ, ಆದರೆ, ಇದು ಮೊದಲೇ ಇದ್ದ ಔಷಧಗಳ ಸಂಯೋಜನೆ’ ಎನ್ನುತ್ತಾರೆ ಸೇಂಟ್ ಜಾನ್ಸ್ ಕಾಲೇಜಿ  ಔಷಧ ಮತ್ತು ವೈದ್ಯಕೀಯ ಸಂಶೋಧನೆಯ ಮುಖ್ಯಸ್ಥ ಡಾ ಡೆನಿಸ್ ಕ್ಸೇವಿಯರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.