ADVERTISEMENT

ಜನಸಂಖ್ಯೆ ನಿಯಂತ್ರಣ: ಎಲ್ಲ ಧರ್ಮೀಯರಿಗೂ ಒಂದೇ ನಿಯಮ -ಸಿ.ಟಿ.ರವಿ

ಸಾರ್ವಜನಿಕ ಚರ್ಚೆ ಆಗಲಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 11:15 IST
Last Updated 6 ಅಕ್ಟೋಬರ್ 2022, 11:15 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ದೇಶದಲ್ಲಿ ಎಲ್ಲ ಧರ್ಮೀಯರಿಗೂ ಅನ್ವಯ ಆಗುವಂತೆ ಜನಸಂಖ್ಯೆ ನಿಯಂತ್ರಣ ಆಗಬೇಕು ಎಂದು ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್ ಭಾಗವತ್‌ ಅವರು ನೀಡಿರುವ ಸಲಹೆ ವ್ಯಾಪಕವಾಗಿ ಸಾರ್ವಜನಿಕವಾಗಿ ಚರ್ಚೆ ಆಗಬೇಕು. ಬಳಿಕ ಎಲ್ಲ ರಾಜ್ಯಗಳ ವಿಧಾನಸಭೆಗಳು ಮತ್ತು ಸಂಸತ್ತಿನಲ್ಲೂ ಚರ್ಚೆ ನಡೆಸಿ ಕಾನೂನು ಜಾರಿ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಳಿ ಕೇಳಿ ಮಸಾಲೆ ಅರೆಯುವುದಿಲ್ಲ ಎಂಬುದು ಹಳ್ಳಿ ಕಡೆಯಲ್ಲಿ ಚಾಲ್ತಿಯಲ್ಲಿರುವ ಮಾತು. ಆದರೆ, ನಾವು ಆ ರೀತಿ ವರ್ತಿಸುವುದಿಲ್ಲ. ಈ ವಿಷಯದಲ್ಲಿ ವಿಸ್ತೃತ ಚರ್ಚೆ ಆಗಬೇಕು ಎಂದು ಬಯಸುತ್ತೇವೆ. ಆ ಬಳಿಕವೇ ಜಾರಿಗೆ ಆಗಲಿ. ಇಂದಿರಾಗಾಂಧಿ ಕಾಲದಲ್ಲಿ ಸಂಜಯ್‌ಗಾಂಧಿ ಬ್ರಿಗ್ರೇಡ್‌ ಸಿಕ್ಕವರನ್ನು ಕರೆದುಕೊಂಡು ಬಂದು ಕಟ್‌ ಮಾಡುತ್ತಿದ್ದರು. ನಾವು ಹಾಗೇ ಮಾಡುವುದಿಲ್ಲ’ ಎಂದರು.

ದೇಶದಲ್ಲಿ ಜಾತಿಯತೆ ಮುಕ್ತ ಮತ್ತು ಅಸ್ಪೃಶ್ಯತೆ ಮುಕ್ತ ಹಿಂದೂ ಸಮಾಜ ನಿರ್ಮಾಣವಾಗಬೇಕು. ಯಾವುದೇ ತಾರತಮ್ಯಗಳು ಇರಬಾರದು ಎಂಬುದು ಭಾಗವತ್ ಅವರ ಉದ್ದೇಶ. ಆರ್‌ಎಸ್‌ಎಸ್‌ ಹಿಂದಿನಿಂದಲೂ ಇದೇ ಸಂಸ್ಕಾರವನ್ನು ಬೆಳೆಸಿಕೊಂಡು ಬಂದಿದೆ. ಬಿಜೆಪಿ ಅದಕ್ಕೆ ಬದ್ಧವಾಗಿದೆ ಎಂದು ಅವರು ಹೇಳಿದರು.

ADVERTISEMENT

ಮಲ್ಲಿಕಾರ್ಜುನ ಖರ್ಗೆಯವರು ಸ್ವ ಇಚ್ಚೆಯಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿಲ್ಲ. ಸೋನಿಯಾಗಾಂಧಿ ಅವರ ನಿರ್ದೇಶನದಂತೆ ನಾಮಪತ್ರ ಸಲ್ಲಿಸಿದ್ದಾರೆ. ಅವರು ಬಯಸಿದರೆ ಚುನಾವಣೆ ನಡೆಯಬಹುದು. ಇಲ್ಲದಿದ್ದರೆ ಏನು ಬೇಕಾದರೂ ಆಗಬಹುದು. ಖರ್ಗೆ ಅವರು ಮೊದಲು ಗುಲಾಮಿ ಮನಸ್ಥಿಯಿಂದ ಹೊರಬರಬೇಕು. ಸುದೀರ್ಘ ರಾಜಕೀಯ ಅನುಭವ ಇರುವ ಅವರ ವ್ಯಕ್ತಿತ್ವ ಜೀತದ ಮನಸ್ಥಿತಿಯನ್ನು ಒಪ್ಪುವಂತಹದ್ದಲ್ಲ ಎಂದು ಭಾವಿಸಿದ್ದೇನೆ. ಮುಳುಗುತ್ತಿರುವ ದೋಣಿಯ ನಾವಿಕನಂತಿರುವ ಪಕ್ಷಕ್ಕೆ ಯಾರೇ ನಾಯಕರಾದರೂ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಜಾತಿಯತೆ ಮುಕ್ತ, ಅಸ್ಪೃಶ್ಯತೆ ಮುಕ್ತ ಹಿಂದೂ ಸಮಾಜ ನಿರ್ಮಾಣವಾಗಬೇಕೆಂಬುದು ಭಾಗವತ್ ಅವರ ಸದುದ್ದೇಶ. ಹಿಂದೂ ಸಮಾಜದಲ್ಲಿ ಯಾವುದೇ ರೀತಿಯ ತಾರತಮ್ಯ ಇರಬಾರದು ಎಂದು ಹೇಳಿದ್ದಾರೆ. ಹಲವಾರು ವರ್ಷಗಳಿಂದ ಸಂಘವೂ ಇದೇ ಸಂಸ್ಕಾರವನ್ನು ಮಾಡಿದೆ ಎಂದು ಹೇಳಿದರು. ದತ್ತಾತ್ರೇಯ ಹೊಸಬಾಳೆ ಅವರು ಅಸಮಾನತೆ, ನಿರುದ್ಯೋಗ ಕುರಿತು ಸುದುದ್ದೇಶದಿಂದ ಕೆಲವು ಮಾತುಗಳನ್ನು ಹೇಳಿದ್ದಾರೆ. ಅದನ್ನು ಪಕ್ಷ ಸ್ವೀಕಾರ ಮಾಡುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.